ಉಡುಪಿ: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡುವಂತೆ ಆಗ್ರಹ.

ಉಡುಪಿ: ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅನುಷ್ಠಾನಕ್ಕೆ ತಂದ ಮಹತ್ವದ ಕೊಂಕಣ ರೈಲ್ವೆ ಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡುವಂತೆ ಆಗ್ರಹಿಸಿ ರಾಜ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲರನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ಉಡುಪಿ ಜಿಲ್ಲೆಯ ಶಾಸಕರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.

ಕೊಂಕಣ ರೈಲ್ವೆ ಯೋಜನೆಗೆ ಇಂದಿಗೆ ಸುಮಾರು 30 ವರ್ಷಗಳು ತುಂಬುತ್ತಿದ್ದು, ಏಕ ಹಳಿಯ ಪ್ರಯಾಣ ಸೌಲಭ್ಯ ಇರುವುದರಿಂದ ಹೆಚ್ಚುವರಿ ರೈಲ್ವೆ ಓಡಾಡಲು ಕಷ್ಟವಾಗುತ್ತದೆ ಮತ್ತು ಕೊಂಕಣ ರೈಲ್ವೆಯಲ್ಲಿ ಅನುದಾನದ ಕೊರತೆ ಇರುವುದರಿಂದ ನೂತನ ರೈಲ್ವೆ ನಿಲ್ದಾಣಗಳೂ ಸೇರಿದಂತೆ, ಮೂಲಭೂತ ಸೌಕರ್ಯ ವ್ಯವಸ್ಥೆಗೆ ಆರ್ಥಿಕ ಕೊರತೆ ಉಂಟಾಗುತ್ತಿದೆ. ಆದ್ದರಿಂದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡುವ ಮೂಲಕ ಭಾರತ ಸರಕಾರದ ಅನುದಾನದ ಪಡೆದು ಕರಾವಳಿ ಪ್ರದೇಶದಲ್ಲೂ ಕೂಡ ಮಹತ್ವದ ರೈಲ್ವೆ ಯೋಜನೆ ಅನುಷ್ಠಾನ ಮಾಡಲು ಅವಕಾಶ ಮಾಡಿಕೊಡ ಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಭಾರತೀಯ ರೈಲ್ವೆಯಲ್ಲಿ ವಿಲೀನಗೊಂಡರೆ, ಮುಂದಿನ ದಿನಗಳಲ್ಲಿ ಸಿಂಗಲ್ ಲೈನನ್ನು ಹೊರತುಪಡಿಸಿ, ಡಬ್ಲಿಂಗ್ ಮಾಡುವುದು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆ ಅನುಷ್ಠಾನವಾಗುವ ಲಭ್ಯ ಅವಕಾಶ ವನ್ನು ಸಚಿವರಿಗೆ ನಿಯೋಗ ಮನವರಿಕೆ ಮಾಡಿತು. ಸುದೀರ್ಘ ಚರ್ಚೆಯ ನಂತರ ಸಹಮತ ವ್ಯಕ್ತಪಡಿ ಸಿದ ಎಂ.ಬಿ.ಪಾಟೀಲ್ ತಕ್ಷಣವೇ ಇಲಾಖಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರಿಗೆ ದೂರವಾಣಿ ಮೂಲಕ ಸೂಚನೆ ನೀಡಿ ತಕ್ಷಣ ಕಡತ ಸಿದ್ದಪಡಿಸಿ, ಮುಂದೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಭಾರತೀಯ ರೈಲ್ವೆಯಲ್ಲಿ ವಿಲೀನವಾಗುವ ಬಗ್ಗೆ ಸಂಸದರು ಮತ್ತು ಶಾಸಕರ ನಿಯೋಗಕ್ಕೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉಪಸ್ಥಿತರಿದ್ದರು.