ಉಡುಪಿ: ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಅವರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ

ಉಡುಪಿ: ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಅವರಿಗೆ ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಜಬ್ಬಾರ್ ಸಮೊ ಮಾತನಾಡಿ, ಯಕ್ಷಗಾನಕ್ಕೆ ಜಾತಿ, ಧರ್ಮದ ತೊಡಕು ಇಲ್ಲ. ಕಲೆ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದೆ. ಕನ್ನಡದ ಹಸಿರು ಬೆಳೆಸುವಲ್ಲಿ ಯಕ್ಷಗಾನದ ಪಾತ್ರ ಅಪಾರವಾಗಿದೆ ಎಂದರು.

ಯಕ್ಷಗಾನ ಕಲಾವಿದ ಪ್ರೊ.ಎಂ.ಎಲ್.ಸಾಮಗ ಅಭಿನಂದನಾ ಭಾಷಣ ಮಾಡಿ, ಸಾಹಿತ್ಯಿಕ ಸೌಂದರ್ಯದ ಜಬ್ಬಾರ್ ಸಮೊ ಅವರ ಅರ್ಥಗಾರಿಕೆ ಅತ್ಯಂತ ಸೊಬಗು. ಕಲಾಭಿರುಚಿಗೆ ಯಾವುದೇ ಜಾತಿ, ಮತ, ಪಂಥಗಳು ಅಡ್ಡಿ ಬರಲ್ಲ. ಕಲಾವಿದ ಕಲಾತ್ಮಕ ದೃಷ್ಠಿಯಿಂದ ಅಭಿನಯ ಮಾಡುತ್ತಾನೆ ಹೊರತು ಧರ್ಮ, ಜಾತಿಯ ಆಧಾರದಲ್ಲಿ ಅಲ್ಲ. ಅದಕ್ಕೆ ಜ್ವಲಂತ ಉದಾಹರಣೆ ಜಬ್ಬಾರ್ ಸಮೋ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಳಿಯ ಪ್ರಶಸ್ತಿ ಸಮಿತಿ ಸದಸ್ಯೆ ದಿ.ಮನೋರಮಾ ಭಟ್ ಅವರ ‘ಆಡಿಯೋ ನಾಟಕಗಳು’ ಹಾಗೂ ‘ಸ್ವಯಂವರ’ ಕೃತಿಗಳನ್ನು ಮುಳಿಯ ರಾಘವಯ್ಯ ಅನಾವರಣಗೊಳಿಸಿ ಪರಿಚಯ ಮಾಡಿದರು. ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ, ಹಿರಿಯ ಸಾಹಿತಿ ಡಾ.ಮಹಾಬಲೇಶ್ವರ ರಾವ್, ಮುಳಿಯ ಪ್ರಶಸ್ತಿ ಸಮಿತಿ ಸದಸ್ಯ ಡಾ.ನರಸಿಂಹ ಮೂರ್ತಿ ಉಪಸ್ಥಿತರಿದ್ದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಪಾಧ್ಯಾಪಕಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು