ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಹಿಂ.ಜಾ.ವೇ ಮುಖಂಡನ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಆರ್ಯಾಪು ಗ್ರಾಮದ ಚರಣ್ ಹಾಗೂ ಈತನ ಸಹೋದರ ಕಿರಣ್ ಮತ್ತು ಮಂಗಳೂರು ಉಳ್ಳಾಲಬೈಲು ನಿವಾಸಿ ಪ್ರೀತೇಶ್, ಬಂಧಿತ ಆರೋಪಿಗಳು.
ಜತೆಗೆ ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಮಂಗಳೂರು ಅತ್ತಾವರ ನಿವಾಸಿ ಸ್ಟೀವನ್ ಮೊಂತೆರೋ ಎಂಬಾತನನ್ನು ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 4ಕ್ಕೇರಿದೆ. ಪುತ್ತೂರಿನ ಸಂಪ್ಯದಲ್ಲಿ ಮಂಗಳವಾರ ರಾತ್ರಿ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಪೊಲೀಸ್ ಠಾಣೆಯ ಎದುರೇ ಹಿಂದೂ ಜಾಗರಣ ವೇದಿಕೆಯ ಮುಖಂಡ, ಅರ್ಯಾಪು ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣರನ್ನು ಇರಿದು ಕೊಲೆ ಮಾಡಲಾಗಿತ್ತು.
ಈ ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಕೊಲೆ ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು.
ಇದೀಗ ಕೊಲೆ ನಡೆದ ಎರಡನೇ ದಿನಕ್ಕೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.