ಉಡುಪಿ: ರಾಷ್ಟ್ರೀಯ ಹೆದ್ದಾರಿ 169(ಎ)ರ ಪರ್ಕಳ ದೇವಿನಗರದಿಂದ ಆದಿಉಡುಪಿ ಕರಾವಳಿ ಜಂಕ್ಷನ್ವರೆಗಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಅಕ್ರಮವಾಗಿ ಕೆಲವೊಂದು ಮರಗಳನ್ನು ಕಡಿದು ಹಾಕಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆಯಡಿ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದರೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕ್ರಮಕೈಗೊಳ್ಳಬೇಕಾಗಿರುವುದರಿಂದ ಬುಧವಾರ ಕುಂದಾಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಪರಿಸರ ಪ್ರೇಮಿ ಬಾಲಕೃಷ್ಣ ಮದ್ದೋಡಿ ನೇತೃತ್ವದಲ್ಲಿ ಅಹವಾಲು ಸಲ್ಲಿಸಲಾಯಿತು.
ಅನಂತರ ಮಾತನಾಡಿದ ಬಾಲಕೃಷ್ಣ ಮದ್ದೋಡಿ, ಚತುಷ್ಪಥ ಕಾಮಗಾರಿಗಾಗಿ 140 ಕಡಿಯುವ ನಿಟ್ಟಿನಲ್ಲಿ ಸಾರ್ವಜನಿಕರ ಅಹವಾಲು ಸಭೆ ಕರೆಯುವ ಮೊದಲೇ ಮಣಿಪಾಲ ಕಸ್ತೂರ್ಬಾ ಕ್ಯಾನ್ಸರ್ ಆಸ್ಪತ್ರೆ, ಶಾಂತಲ ಹೊಟೇಲ್ ಹೀಗೆ ಹಲವು ಕಡೆಗಳಲ್ಲಿ ಹತ್ತಾರು ಬೃಹತ್ ಮರಗಳನ್ನು ಕಡಿದು ಸಾಗಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಲೋಹಿತ್ ಅವರು, ಅರಣ್ಯ ಇಲಾಖೆಯಿಂದ ಯಾವುದೇ ಮರಗಳನ್ನು ಕಡಿಯಲು ಈವರೆಗೆ ಅನುಮತಿ ನೀಡಿಲ್ಲ. ಅನುಮತಿ ಇಲ್ಲದೆ ಮರ ಕಡಿದಿರುವುದರಿಂದ ಇದು ಅಕ್ರಮವಾಗುತ್ತದೆ ಎಂದರು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪರಿಸರವಾದಿಗಳು, ರಾಷ್ಟ್ರೀಯ ಹೆದ್ದಾರಿಯವರು ಎಷ್ಟು ಮರಗಳನ್ನು ಹೀಗೆ ಅಕ್ರಮವಾಗಿ ಕಡಿದಿದ್ದಾರೆ ಮತ್ತು ಆ ಮರಗಳನ್ನು ಎಲ್ಲಿಗೆ ಸಾಗಿಸಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಇದು ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದ್ದು, ಈ ಕುರಿತು ಇಲಾಖಾಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪರಿಸರವಾದಿ ರತ್ನಾಕರ ಇಂದ್ರಾಳಿ ಅವರು ಮಾತನಾಡಿ, ವಲಸೆ ಹಕ್ಕಿಗಳ ವಾಸಸ್ಥಾನಕ್ಕೆ ಕೊಡಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ 140 ಮರಗಳನ್ನು ಕಡಿಯಲು ಉದ್ದೇಶಿಸಿದ್ದು, ಇದರಿಂದ ಪ್ರತಿವರ್ಷ ಹೊರ ದೇಶಗಳಿಂದ ಮಣಿಪಾಲಕ್ಕೆ ವಲಸೆ ಬರುತ್ತಿದ್ದ ಹಕ್ಕಿಗಳಿಗೂ ಅಪಾಯ ಎದುರಾಗಿದೆ. ವಲಸೆ ಬರುವ ವಿವಿಧ ಪ್ರಬೇಧದ ಪಕ್ಷಿಗಳು ಮಣಿಪಾಲದ ರಾಷ್ಟ್ರೀಯ ಹೆದ್ದಾರಿಯ ಇಕ್ಕೇಲಗಳಲ್ಲಿರುವ ಮರಗಳಲ್ಲಿ ಗೂಡು ಕಟ್ಟಿ ಮರಿ ಮಾಡುತ್ತಿದ್ದವು. ಆದರೆ ಇದೀಗ ಈ ಮರಗಳು ಕೂಡ ಕಡಿಯುವ ಪಟ್ಟಿಯಲ್ಲಿರುವುದರಿಂದ ವಲಸೆ ಪಕ್ಷಿಗಳಿಗೆ ವಾಸವೇ ಇಲ್ಲವಾಗಲಿದೆ. ಆದ್ದರಿಂದ ಮರಗಳ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.
ನಗರಸಭೆ ಸದಸ್ಯ ಮಂಜುನಾಥ್ ಮಣಿಪಾಲ, ಬಾಲಕೃಷ್ಣ ಮದ್ದೋಡಿ, ಸ್ವಚ್ಛ ಭಾರತ್ ಬ್ರಿಗೇಡ್ನ ಸುಧಾಕರ್, ರತ್ನಾಕರ ಇಂದ್ರಾಳಿ, ಬಾಲಕೃಷ್ಣ ಪರ್ಕಳ ಅಹವಾಲುಗಳನ್ನು ಸಲ್ಲಿಸಿ, ಸಾಧ್ಯವಾಗುವಷ್ಟು ಮರಗಳನ್ನು ಬೇರೆ ಕಡೆ ಸ್ಥಳಾಂತರಿಸಿ ಮರುಜೀವ ನೀಡಬೇಕು ಎಂದು ಒತ್ತಾಯಿಸಿದರು.
ಸ್ಥಳಾಂತರ ಮಾಡಿದರೆ ಯಾವ ಮರಗಳು ಬದುಕಿ ಉಳಿಯಬಹುದು ಎಂಬುದರ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್ ಹೇಳಿದರು.
ಸಭೆಯಲ್ಲಿ ಪ್ರಭಾರ ಉಡುಪಿ ವಲಯ ಅರಣ್ಯಾಧಿಕಾರಿ ಎ.ಎ.ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.