ಉಡುಪಿ: ಫೆ.9ರಂದು ವಿಶ್ವಕರ್ಮ ಟ್ರಸ್ಟ್ ವಿದ್ಯಾರ್ಥಿವೇತನ ವಿತರಣೆ.

ಉಡುಪಿ: ಜಿಲ್ಲಾ ಶ್ರೀ ವಿಶ್ವಕರ್ಮ ಎಜುಕೇಶನಲ್ ಟ್ರಸ್ಟ್ ವತಿಯಿಂದ 2024-25ನೇ ಸಾಲಿನಲ್ಲಿ 205 ವಿದ್ಯಾರ್ಥಿಗಳಿಗೆ 9.15 ಲ.ರೂ. ವಿದ್ಯಾರ್ಥಿವೇತನ ವಿತರಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎ. ಆಚಾರ್ಯ ಮಣಿಪಾಲ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಫೆ.9ರಂದು ಕುಂಜಿಬೆಟ್ಟುವಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಬೆಳಗ್ಗೆ 10ಕ್ಕೆ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತಸರ ಗಣೇಶ್ ಆಚಾರ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಧಾರವಾಡ ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ| ಈರಣ್ಣ ಪತ್ತಾರ್ ಭಾಗವಹಿಸಲಿದ್ದಾರೆ ಎಂದರು.

ಖಾಯಂ ಟ್ರಸ್ಟಿ ಬಿ. ಪ್ರಕಾಶ್ ಆಚಾರ್ಯ ಕಾರ್ಕಳ, ಉಡುಪಿಯ ಆ‌ ವಿಎಸ್ ಸಂಘದ ಅಧ್ಯಕ್ಷ ವೆಂಕಟೇಶ ಆಚಾರ್ಯ, ಹುಬ್ಬಳ್ಳಿಯ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯ ಮುಖ್ಯಸ್ಥ ಭೀಮಸೇನ ಬಡಿಗೇರ ಭಾಗವಹಿಸಲಿದ್ದಾರೆ. ಈ ಬಾರಿ ಮೂಡಿಗೆರೆ ಮೂಲದ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿ ಪುಷ್ಪಾಗೌಡ ಅವರಿಗೆ 2024-25ನೇ ಸಾಲಿನ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಮಂಗಳೂರು ವಿ.ವಿ.ಯ 2022-23ನೇ ಸಾಲಿನಲ್ಲಿ ಎಂ.ಕಾಂ. ಪರೀಕ್ಷೆಯಲ್ಲಿ ದ್ವಿತೀಯ ಬ್ಯಾಂಕ್ ಗಳಿಸಿರುವ ಪ್ರೀತಿ ಎಂ. ಅಂಬಲಪಾಡಿಯನ್ನು ಗೌರವಿಸಲಾಗುವುದು ಎಂದರು.

ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ವಿಜ್ಞಾನಿಯಾಗಿರುವ ಡಾ| ಸದಾನಂದ ಆಚಾರ್ಯ ಬೈಕಾಡಿ, ಪೂರ್ಣಪ್ರಜ್ಞ ಸಂಧ್ಯಾ
ಕಾಲೇಜಿನಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿರುವ ಡಾ| ರಾಘವೇಂದ್ರ ಆಚಾರ್ಯ ಹಾಗೂ ನಿಟ್ಟೆ ವಿ.ವಿ. ಜೀವ ರಸಾಯನಶಾಸ್ತ್ರ ವಿಭಾಗದಲ್ಲಿ ಸಂಶೋಧಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ| ರಂಜಿತಾ ಮಂಗಳೂರು ಅವರನ್ನು ಗೌರವಿಸಲಾಗುವುದು. ಟ್ರಸ್ಟ್ ಫಲಾನುಭವಿಯಾಗಿದ್ದು ಉನ್ನತ ಹುದ್ದೆಯಲ್ಲಿರುವ ಲಕ್ಷ್ಮೀ ಆಚಾರ್ಯ ಕೆ. ಹಾಗೂ ಯೋಗೀಶ್ ಕುಮಾರ್ ಶುಭಾಶಂಸನೆಗೈಯಲಿದ್ದಾರೆ ಎಂದರು.

ಅಪರಾಹ್ನ 2:30ಕ್ಕೆ ಟ್ರಸ್ಟ್ ಪೋಷಕರ ಸಮಾವೇಶ ಜರಗಲಿದೆ. ಜಿಲ್ಲಾ ಕಾರ್ಪೆಂಟರ್ ಅಸೋಸಿಯೇಶನ್ ಅಧ್ಯಕ್ಷ ಅಚ್ಯುತ ಆಚಾರ್ಯ ಮಧ್ವನಗರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಡುಪಿಯ ವಿಶ್ವಬ್ರಾಹ್ಮಣ ಯುವಕ ಸೇವಾದಳದ ಅಧ್ಯಕ್ಷ ಪಿ.ವಿ. ನಾಗರಾಜ ಆಚಾರ್ಯ ಹಾಗೂ ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಮುಕ್ತಾ ಜಗದೀಶ್‌ ಭಾಗವಹಿಸಲಿದ್ದರೆ.

ಚಿತ್ರಕಲಾವಿದರಾದ ಮಹೇಶ್ ಆಚಾರ್ಯ ಮರ್ಣೆಯವರ ಕಲಾಕೃತಿಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನ ಮಹಾಲಸಾ ಕಲಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ| ಎನ್.ಎಸ್. ಪತ್ತಾರ್ ಮಂಗಳೂರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10.30ರಿಂದ ಅಪರಾಹ್ನ 3.30ರ ತನಕ ಚಿತ್ರಕಲಾ ಪ್ರದರ್ಶನ ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದರು. ಟ್ರಸ್ಟ್‌ನ ವಸಂತ ಆಚಾರ್ಯ ಕಾರ್ಕಳ, ಕೋಶಾಧಿಕಾರಿ ಪ್ರೊ| ಭಾಸ್ಕರ ಆಚಾರ್ಯ ಕುರ್ಕಾಲು, ನಿಕಟಪೂರ್ವ ಅಧ್ಯಕ್ಷ ಡಾ| ದಾಸಾಚಾರ್ಯ, ಸದಸ್ಯ ಪಾಂಡುರಂಗ ಆಚಾರ್ಯ ಉಪಸ್ಥಿತರಿದ್ದರು.