ವಿದ್ಯಾರ್ಥಿಗಳು ಸಮಸ್ಯೆಗೆ ಸ್ಪಂಧಿಸುವ‌ ಗುಣ ಬೆಳೆಸಿಕೊಂಡರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ: ಜಯಪ್ರಕಾಶ್ ಹೆಗ್ಡೆ

ಉಡುಪಿ: ವಿದ್ಯಾರ್ಥಿ ಸಂಘಟನೆಗಳಿಂದ ನಾಯಕತ್ವದ ತರಬೇತಿ ಸಿಗುತ್ತದೆ. ವಿದ್ಯಾರ್ಥಿ ಸಂಘಟನೆಗಳ ನಡುವೆ ಆರೋಗ್ಯಕರ
ಸ್ಪರ್ಧೆ ಇರಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.
ಉಡುಪಿ ಕಿದಿಯೂರು ಹೊಟೇಲ್‌ನ ಸಭಾಂಗಣದಲ್ಲಿ ಶನಿವಾರ ದಕ್ಷಿಣ ಕರ್ನಾಟಕ ವಿದ್ಯಾರ್ಥಿ ಪರಿಷತ್‌ ಇದರ ಉಡುಪಿ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ, ರಾಜ್ಯ ಹಾಗೂ ದೇಶದ ಸಮಸ್ಯೆಯ ಕುರಿತು ತಿಳುವಳಿಕೆ ಹೊಂದಬೇಕು. ಸರ್ಕಾರ ಕೈಗೊಳ್ಳುವ ಪ್ರಮುಖ ನಿರ್ಧಾರಗಳ ಬಗ್ಗೆ ಅರಿವು ಹೊಂದಬೇಕು. ಅದರ ಬಗ್ಗೆ ತಮ್ಮೊಳಗೆ ಚರ್ಚೆ ಮಾಡಬೇಕು. ವಿದೇಶಿ ಬಂಡವಾಳದ ಹೂಡಿಕೆ ಕಡಿಮೆಯಾಗಿ ಉದ್ಯೋಗ ಸೃಷ್ಟಿ ಆಗದಿದ್ದರೆ ಸ್ವಂತ ಉದ್ಯೋಗ ಮಾಡಲು ಸಜ್ಜಾಗಬೇಕು. ಅದಕ್ಕೆ ಬೇಕಾಗುವ ಪೂರ್ವ ತಯಾರಿಯನ್ನು ಮೊದಲೇ ಮಾಡಬೇಕು ಎಂದು ಹೇಳಿದರು.
ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ ಪರಿಷತ್‌ನ ಲಾಂಛನವನ್ನು ಅನಾವರಣಗೊಳಿಸಿದರು. ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ, ಕುಂದಾಪುರದ ಉದ್ಯಮಿ ಸುರೇಂದ್ರ ಶೆಟ್ಟಿ, ಕಾರ್ಕಳದ ಉದ್ಯಮಿ ಉದಯ ಕುಮಾರ್‌ ಶೆಟ್ಟಿ ಮುನಿಯಾಲು, ನಗರಸಭಾ ಸದಸ್ಯರಾದ ವಿಜಯ ಪೂಜಾರಿ ಬೈಲೂರು, ಪ್ರಭಾಕರ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉದ್ಯಮಿಗಳಾದ ವಿನೋದ್‌ ಕುಮಾರ್‌ ಅಂಬಲಪಾಡಿ, ಸದಾನಂದ ಕಾಂಚನ್‌, ಸುಹಾನ್‌ ಬಿ. ಶೆಟ್ಟಿ, ರಂಜನ್‌ ಸಾಲಿಯಾನ್‌ ಮೊದಲಾದವರು ಉಪಸ್ಥಿತರಿದ್ದರು.