ಜ.26ರಂದು “ಗುರುವಂದನಾ ಕಾರ್ಯಕ್ರಮ”

ಉಡುಪಿ: ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಗುರುವಂದನಾ ಸಮಿತಿಯ ವತಿಯಿಂದ “ಗುರುವಂದನಾ ಕಾರ್ಯಕ್ರಮ” ವನ್ನು ಇದೇ ಜ.26ರಂದು ಸಂಜೆ 4ಗಂಟೆಗೆ ದೊಡ್ಡಣಗುಡ್ಡೆಯ ಸರಕಾರಿ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ರಾವ್ ತಿಳಿಸಿದರು.

ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4ರಿಂದ 5 ರವರೆಗೆ ಹಳೆ ವಿದ್ಯಾರ್ಥಿ ಹಾಗೂ ಗುರುಗಳ ಕುಶಲೋಪರಿ ಮಾತುಕತೆ ನಡೆಯಲಿದೆ. ಸಂಜೆ 6ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ 30 ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಸನ್ಮಾನ ನೆರವೇರಲಿದೆ ಎಂದರು.

ಸಮಿತಿಯ ಗೌರವಾಧ್ಯಕ್ಷರು ಆಗಿರುವ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸೋದೆ ಮಠಾಧೀಶರಾದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಜೆ 8 ರಿಂದ 9 ರವರೆಗೆ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 9ರಿಂದ ಉಡುಪಿಯ ಶ್ರೀಕೃಷ್ಣ ಕಲಾವಿದರಿಂದ ತುಳು ನಾಟಕ “ಆನಿದ ಮನದಾನಿ” ಪ್ರದರ್ಶನಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಸಂತೋಷ್ ಪಾಲನ್, ಗೌರವಾಧ್ಯಕ್ಷ ಸಂಶುದ್ದೀನ್, ಕೋಶಾಧಿಕಾರಿ ಗುರುಪ್ರಸಾದ್ ಶರ್ಮ, ಉಪಾಧ್ಯಕ್ಷ ಕೇಶವ ಆಚಾರ್ಯ, ಮಹಿಳಾ ಉಸ್ತುವಾರಿ ಮಮತಾ ಉಪಸ್ಥಿತರಿದ್ದರು.