ಕಾರ್ಕಳ: ಮಹಿಳೆಯರು ಎಂದಿಗೂ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡಿರಬೇಕು. ಒಬ್ಬ ಮಹಿಳೆಯ ಸಮಸ್ಯೆಯನ್ನು ಅರಿಯುವ ಶಕ್ತಿ ಇನ್ನೊಬ್ಬ ಮಹಿಳೆಗಿದೆ ಹಾಗಾಗಿ ಮಹಿಳಾ ಸಬಲೀಕರಣ ಘಟಕಗಳು ಮಹಿಳೆಯ ಸಮಸ್ಯೆ ಅರಿತುಕೊಳ್ಳುವಲ್ಲಿ ಬಹುದೊಡ್ಡ ಪಾತ್ರವಹಿಸಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿದ್ದರೂ ತಮ್ಮದೇ ಆದ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನದ ಅವಶ್ಯಕತೆಯಿದೆ ಎಂದು ಉಡುಪಿಯ ಎ.ವಿ ಬಾಳಿಗ ಆಸ್ಪತ್ರೆಯ ಮನೋವೈದ್ಯ ವಿರೂಪಾಕ್ಷ ದೇವರಮನೆ ಹೇಳಿದರು.
ಇವರು ಶ್ರೀ ಭುವನೇಂದ್ರ ಕಾಲೇಜಿನ ಮಹಿಳಾ ಸಬಲಿಕರಣ ಘಟಕ ಹಾಗೂ ಮಹಿಳಾ ದೌರ್ಜನ್ಯ ತಡೆ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಪ್ರಸ್ತುತ ವರ್ಷದ ಚಟುವಟಿಕೆಗಳ ಉದ್ಘಾಟನಾ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ಹದಿಹರೆಯವು ಆಸಕ್ತಿಯ ಕಡೆ ಹೆಜ್ಜೆ ಹಾಕುವ ಸಮಯ. ಆಸಕ್ತಿ ಇದ್ದಲ್ಲಿ ಏನನ್ನು ಮಾಡಲು ಸಾಧ್ಯ. ಗುರಿ ಹೊಂದುವ ಮೊದಲು ಗುರಿ ಏನೆಂದು ನಾವು ತಿಳಿದಿರಬೇಕು.ಕೀಳರಿಮೆಗಳ ಕಡೆ ಗಮನ ಹರಿಸದೇ ಆಸಕ್ತಿಯಿಂದ ಸಾಗಿದಾಗ ಮಾತ್ರ ನಮ್ಮ ಗುರಿಹೊಂದಲು ಸಾಧ್ಯ. ನಮ್ಮಲ್ಲಿ ದೈಹಿಕ ಸೌಂದರ್‍ಯಕ್ಕಿಂತ ಆಂತರಿಕ ಸೌಂದರ್‍ಯ ಹೆಚ್ಚಿರಬೇಕು.ಜಗತ್ತು ಆಂತರಿಕ ಸೌಂದರ್‍ಯವನ್ನು ಎಂದಿಗೂ ಮರೆಯುವುದಿಲ್ಲ ದೈಹಿಕ ಸೌಂದರ್‍ಯ ಜಗತ್ತಿನಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ.
ಈಗಿನ ಕಾಲಘಟ್ಟದಲ್ಲಿ ನಮ್ಮ ಗಮನ ಎಲ್ಲವೂ ಮೊಬೈಲ್‌ಗಳ ಕಡೆ ಸಾಗಿವೆ ಶಬ್ದ ಬಳಕೆಗಳ ಕೊರತೆ ನಮ್ಮಲ್ಲಿ ಕಾಣುತ್ತಿವೆ,ನಮ್ಮ ಕನಸು ಎಂದಿಗೂ ಸಾಧನೆಯ ಕಡೆ ಸಾಗಬೇಕು ಆಗ ಮಾತ್ರ ನಮ್ಮ ಕನಸಿಗೊಂದು ಬೆಲೆ ಸಿಗುವುದು.ಪ್ರೀತಿ,ಗೌರವ,ವಿಶ್ವಾಸ ಇವೆಲ್ಲವೂ ಕೊಡುವಂತಹ ವಿಚಾರಗಳೆ ಹೊರತು ಮರಳಿ ಪಡೆದುಕೊಳ್ಳುವಂತದಲ್ಲ. ಹಾಗಾಗಿ ಜೀವನದಲ್ಲಿ ಈ ಪಾಠಗಳನ್ನು ಕಲಿತುಕೊಳ್ಳಬೇಕು ಎಂದು ಹೇಳಿದರು.
ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್ ಎ ಕೋಟ್ಯಾನ್ ಅವರು ಮಾತನಾಡಿ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಒಂದು ಗೌರವ ಮತ್ತು ಜವಾಬ್ದಾರಿ ಇದೆ ಅಲ್ಲದೆ ಉತ್ತಮ ಸ್ಥಾನವನ್ನು ನೀಡಲಾಗಿದೆ. ಒಂದು ಸಂಸ್ಥೆ ಗೌರವದಿಂದ ಹೆಸರುವಾಸಿಯಾಗಬೇಕಾದರೆ ಅಲ್ಲಿ ಹೆಣ್ಣಿಗೆ ಗೌರವವಿರಬೇಕು ಎಂದು ಹೇಳಿದರು.
ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ತಂತ್ರಿ ಕೀರ್ತಿ ದಿನೇಶ್ ಸ್ವಾಗತಿಸಿ,ಮಹಿಳಾ ದೌರ್ಜನ್ಯ ತಡೆ ಘಟಕದ ಸಂಯೋಜಕಿ ಸೋಫಿಯಾ ಜಾಯ್ಸ್ ಪಿರೇರಾ ವಂದಿಸಿದರು, ವಿದ್ಯಾರ್ಥಿನಿ ಶನಾಝ್ ನಿರೂಪಿಸಿದರು.