ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮಾನವಿಕ ಸಂಘ ಉದ್ಘಾಟನೆ

ಕಾರ್ಕಳ : ಮನುಷ್ಯನಾದವನಿಗೆ ಅವನದ್ದೇ ಆದ ಯೋಗ್ಯತೆಗಳಿವೆ, ಅವನಿಗೆ ಅವನದ್ದೇ ಶೈಲಿಯ ಜೀವನ ಪಾಠಗಳಿವೆ. ಸಮಾಜದಲ್ಲಿನ ರೂಪುರೇಷೆಯಲ್ಲೇ ಎಲ್ಲರನ್ನು ಅನುರಿಸಿ ಅವನು ಬೆಳೆದಿರುತ್ತಾನೆ. ಮಾನವ ಸಂಘ ಜೀವಿ ಹಾಗಾಗಿ ಸಹಬಾಳ್ವೆಯ ಜೀವನ ಅವನಿಗೆ ತಿಳಿದಿರಬೇಕು ಆಗ ಮಾತ್ರ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬಾಳಲು ಸಾಧ್ಯ. ಜೀವನ ಪಾಠವನ್ನು ಶಿಕ್ಷಣ ಕಲಿಸುವುದಿಲ್ಲ ನಮ್ಮ ಸುತ್ತಲಿನವರು ಕಲಿಸುತ್ತಾರೆ ಎಂದು ಕಾರ್ಕಳದ ಎಸ್.ವಿ.ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮ್‌ದಾಸ್ ಪ್ರಭು ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಪ್ರಸ್ತುತ ವರ್ಷದ ಮಾನವಿಕ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅವಿಭಕ್ತ ಕುಟುಂಬದ ವರ್ತುಲದೊಳಗೆ ಬೆಳೆದವರಿಗೆ ಕೂಡು ಕುಟುಂಬದ ಮಹತ್ವ ತಿಳಿದಿರುತ್ತದೆ. ಆದರೆ ಇಂದಿನ ಸಾಮಾಜಿಕ ವಾತಾವರಣ ಮಕ್ಕಳಿಗೆ ಮಾರಕವಾಗಿದೆ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳು ಇಂದಿನ ಪೀಳಿಗೆಯ ಮೇಲೆ ಅಪಾರ ಪರಿಣಾಮ ಬೀರುತ್ತಿದ್ದು, ಇದರಿಂದ ಮಕ್ಕಳು ಸಾಮಾಜಿಕ ಮೌಲ್ಯಗಳಿಗಿಂತ ಹೆಚ್ಚಾಗಿ ಇತರ ವಿಷಯಗಳ ಕಡೆಗೆ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ ಎಂದರು.

ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ ಕೋಟ್ಯಾನ್ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿದೆ. ವಿದ್ಯಾಭ್ಯಾಸವೆಂದರೆ ಬರಿ ಪುಸ್ತಕ ಪಾಠವಲ್ಲ ಮನುಷ್ಯತ್ವವೆಂಬುದನ್ನು ಕಲಿಸಿಕೊಡಬೇಕು ಹಾಗೂ ಮನುಷ್ಯತ್ವದಿಂದ ದೈವತ್ವದೆಡೆಗೆ ನಮ್ಮನ್ನು ಕರೆದೊಯ್ಯಬೇಕು. ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಅವರು ಅವಲಂಬಿಸಿದ ಪರಿಸರ ಹಾಗೂ ತಂದೆ ತಾಯಿಯ ಮೇಲೆ ನಿರ್ಧಾರವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ದತ್ತಾತ್ರೇಯ ಮಾರ್ಪಳ್ಳಿ, ಮಾನವಿಕ ಸಂಘದ ಸಂಚಾಲಕ ರವಿಕುಮಾರ್, ರಾಜ್ಯಶಾಸ್ತ್ರ ಉಪನ್ಯಾಸಕಿ ಸುಮಾಲಿನಿ ಜೈನ್, ವಿದ್ಯಾರ್ಥಿ ಕಾರ್‍ಯದರ್ಶಿಯಾದ ಪ್ರದೀಪ್ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕಾರ್‍ಯದರ್ಶಿ ಮಹಮ್ಮದ್ ರಿಯಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿನಿಯರಾದ ಶ್ರದ್ದಾ ಸ್ವಾಗತಿಸಿ, ಮನೀಷಾ ಕಶಪ್ ಪ್ರಾರ್ಥನೆಗೈದು, ಮಂಜುಳಾ ವಂದಿಸಿದರು,