ಕೋಟಿಲಿಂಗೇಶ್ವರನ ಸನ್ನಿಧಿಯಲ್ಲಿ ಧ್ವಜ ಮರ ಮೆರವಣಿಗೆಯ ಅಬ್ಬರ: ಪುಳಕದಲ್ಲಿ ಮಿಂದೆದ್ದ ಭಕ್ತ ಸಾಗರ

-ಶ್ರೀಕಾಂತ ಹೆಮ್ಮಾಡಿ

ಕುಂದಾಪುರ: ಕುಂದಾಪುರ ತಾಲೂಕಿನ ಕೋಟೆಶ್ವರ ಆಸುಪಾಸಿನ ಗ್ರಾಮಗಳಲ್ಲಿ ಸಂಭ್ರಮದ ವಾತಾವರಣ. ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಭಕ್ತವೃಂದ. ಪಂಚ ವಾದ್ಯಗಳ ಜಯಘೋಷ. ತಟ್ಟಿರಾಯಗಳ ಕುಣಿತ…ಈ ಪುರಮೆರವಣಿಗೆಯಲ್ಲಿ ಸಾಗಿಬಂದಿದ್ದು ಧ್ವಜಮರ. ಐತಿಹಾಸಿಕ ಕ್ಷಣವೊಂದಕ್ಕೆ ಈ ಕೋಟಿಲಿಂಗೇಶ್ವರನ ಸನ್ನಿಧಿ ಸಾಕ್ಷಿಯಾಯಿತು.

ಒಂದು ಸಾವಿರದ ಇನ್ನೂರು ವರ್ಷಗಳ ಇತಿಹಾಸ ಇರುವ ಧ್ವಜಪುರ ಖ್ಯಾತಿಯ ಕುಂದಾಪುರ ತಾಲೂಕಿನ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರನ ಮಹಿಮೆ ಅಪಾರ. ರಾಜ್ಯದ ಅತಿ ದೊಡ್ಡ ಜಾತ್ರೆಯ ಪೈಕಿ ಈ ಕ್ಷೇತ್ರದಲ್ಲಿ ನಡೆಯುವ ಕೊಡಿ ಹಬ್ಬಕ್ಕೆ ವಿಶಿಷ್ಟ ಮಹತ್ವವಿದೆ.

ಕ್ಷೇತ್ರದ ಧ್ವಜಮರವು ೧೯೫೪ನೇ ಇಸವಿಯಲ್ಲಿ ಸುಮಾರು ೬೫ ವರ್ಷಗಳ ಹಿಂದಿನದ್ದಾಗಿದ್ದು ಒಂದಷ್ಟು ಶಿಥಿಲಾವಸ್ಥೆ ತಲುಪಿದ ಹಿನ್ನೆಲೆ ಅದಲ್ಲದೇ ಶಾಸ್ತ್ರ ನಿಯಮದ ಪ್ರಕಾರ ದೇವಳದ ವ್ಯವಸ್ಥಾಪನ ಸಮಿತಿ ಧ್ವಜಮರ ಬದಲಾವಣೆಗೆ ಮುಂದಾಗಿತ್ತು.

ಹಿಂದಿನ ಮರವು ೮೫ ಅಡಿಗಿಂತಲೂ ಉದ್ದವಿದ್ದು ಅದಕ್ಕೂ ಕೊಂಚ ದೊಡ್ಡ ಧ್ವಜ ಮರದ ಅಗತ್ಯವಿತ್ತು. ಹಲವೆಡೆ ಮರಕ್ಕಾಗಿ ಹುಡುಕಾಡಿದರೂ ಕೂಡ ಸೂಕ್ತ ಮರ ಸಿಗದ ಹಿನ್ನೆಲೆ ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಕುಕ್ಕುಜಡ್ಕ ಎಂಬಲ್ಲಿ ೯೦ ಅಡಿ ಉದ್ದದ ಬೋಗಿ ಮರವನ್ನು ಅನ್ವೇಷಿಸಿ ಅದನ್ನು ಕಡಿಯಲು ಬೇಕಾದ ಸರಕಾರಿ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಮರ ಕಟಾವು ನಡೆಸಲಾಗಿತ್ತು.

ಹಾಲಿ ಹಾಗೂ ಮಾಜಿ ಸಚಿವರು, ಶಾಸಕರುಗಳು, ಇಲಾಖಾಧಿಕಾರಿಗಳು ಕೂಡ ಈ ಒಂದು ಪ್ರಕ್ರಿಯೆಗೆ ಧಾರ್ಮಿಕತೆಯ ನಿಟ್ಟಿನಲ್ಲಿ ಸಹಕಾರ ನೀಡಿದ್ದರು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮರವನ್ನು ಸುಳ್ಯದಿಂದ ಟ್ರಾಲಿ ವಾಹನದ ಮೂಲಕ ತರಲಾಗಿತ್ತು. ಕಾಡಿನ ಮದ್ಯದಿಂದ ನಾಜೂಕಾಗಿ ಮರವನ್ನು ಕಡಿದು ರಾತ್ರಿಯೇ ಮರವನ್ನು ತೆಕ್ಕಟ್ಟೆಗೆ ತಂದು ಇರಿಸಲಾಗಿತ್ತು.

ಅದ್ದೂರಿ ಮೆರವಣಿಗೆ:
ಕೋಟಿಲಿಂಗನ ಸನ್ನಿಧಿಗೆ ಧ್ವಜ ಮರವು ಬರುವ ವಿಚಾರ ತಿಳಿಯುತ್ತಲೇ ಸಹಸ್ರಾರು ಮಂದಿ ಭಕ್ತರು ಕಾತುರರಾಗಿದ್ದು. ಬುಧವಾರ ಬೆಳಿಗ್ಗೆ ತೆಕ್ಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡ ಧ್ವಜ ಮರದ ಪುರಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡರು.

ಮೆರವಣಿಗೆಗೂ ಮೊದಲು ಕೆಲ ಹೊತ್ತು ವರ್ಷಧಾರೆ ಆಗಿದ್ದು ಭಕ್ತರ ಉತ್ಸಾಹ ಹೆಚ್ಚಿಸಿತ್ತು. ತಟ್ಟಿರಾಯ ಕುಣಿತ, ಪಂಚ ವಾಧ್ಯ, ಕಹಳೆಕೊಂಬುಗಳ ಘೋಷಗಳ ನಡುವೆ ಸಾಗಿಬಂದ ಮೆರವಣಿಗೆಯನ್ನು ಸಾವಿರಾರು ಮಂದಿ ದಾರಿಯಲ್ಲಿ ನಿಂತು ವೀಕ್ಷಿಸಿದರು.

ತೆಕ್ಕಟ್ಟೆಯಿಂದ ಕೋಟೇಶ್ವರ ವಿಶ್ವಕರ್ಮ ಕಲ್ಯಾಣಮಂಟಪದವರೆಗೂ ಟ್ರಾಲಿ ಮೂಲಕ ಧ್ವಜ ಮರ ತಂದಿದ್ದು ಬಳಿಕದ ಜಾಗವು ಕಿರಿದಾದ ಕಾರಣ ಎರಡು ಕ್ರೇನ್ ಮೂಲಕ ಧ್ವಜ ಮರವನ್ನು ನಾಜೂಕಾಗಿ ತರಲಾಯ್ತು. ಮಧ್ಯಾಹ್ನದ ಸುಮಾರಿಗೆ ದೇವಸ್ಥಾನದ ರಥ ನಿಲ್ಲುವ ಜಾಗಕ್ಕೆ ಬಂದ ಧ್ವಜಮರವನ್ನು ಕಣ್ತುಂಬಿಕೊಂಡ ಭಕ್ತ ಸಮೂಹ ಮರಕ್ಕೆ ಕೈ ಮುಗಿದ್ರು.

ಅಲ್ಲದೇ ತಾಳ ಘೋಷಕ್ಕೆ ಹೆಜ್ಜೆ ಹಾಕಿ ಹರಹರ ಮಹಾದೇವ ಘೋಷಣೆ ಕೂಗಿ ಭಕ್ತಿ ಸಮರ್ಪಿಸಿದರು. ದೇವಸ್ಥಾನದ ತಂತ್ರಿಗಳಾದ ಪ್ರಸನ್ನ ಕುಮಾರ್ ಐತಾಳ್ ನೇತ್ರತ್ವದಲ್ಲಿ ಧ್ವಜಮರಕ್ಕೆ ಪೂಜಾವಿಧಿವಿಧಾನ ನಡೆಯಿತು. ತದನಂತರ ದೇವಸ್ಥಾನದ ಪೂಜಾ ಕೈಂಕರ್ಯ ನೆರವೇರಿಸಿ ಧ್ವಜಮರ ತರುವ ಪ್ರಕ್ರಿಯೆಲ್ಲಿ ಪಾಲ್ಘೊಂಡ ಮಂದಿಗೆ ಗೌರವಿಸಲಾಯಿತು.

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ ಮಾರ್ಕೋಡು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಶೋಕ್ ಪೂಜಾರಿ ಬೀಜಾಡಿ, ಶಂಕರ ಚಾತ್ರಬೆಟ್ಟು, ರಾಜೀವ್ ಶೆಟ್ಟಿ, ಸುಶೀಲಾ ಶೇಟ್, ಭಾರತಿ, ಜ್ಯೋತಿ, ಧಾರ್ಮಿಕ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಮುಖರಾದ ಬಿ. ಹೆರಿಯಣ್ಣ, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ರಾಜೇಶ್ ಕಾವೇರಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ವಿಕಾಸ್ ಹೆಗ್ಡೆ, ಗಣಪತಿ ಟಿ. ಶ್ರೀಯಾನ್, ಪ್ರಕಾಶ್ ಬೀಜಾಡಿ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ಶಾಂತಾ ಗೋಪಾಲ ಕೃಷ್ಣ, ಸದಸ್ಯೆ ಜಾನಕಿ ಬಿಲ್ಲವ, ಹಿಂದೂ ಸಂಘಟನೆ ಪ್ರಮುಖರು ಮೊದಲಾದವರಿದ್ದರು.

ತೆಕ್ಕಟ್ಟೆ, ಕೋಟೇಶ್ವರ, ಗೋಪಾಡಿ, ಕುಂಭಾಸಿಯಲ್ಲಿ ಮುಖಂಡರು ಹಾಗೂ ಸಂಘ ಸಂಸ್ಥೆಗಳು ದಾರಿ ಮದ್ಯೆ ಫಲಾಹಾರ, ತಂಪುಪಾನೀಯ, ಮಜ್ಜಿಗೆ ವಿತರಿಸಿ ಬಿಸಿಲ ಬೇಗೆ ನೀಗಿಸಿದರು. ಸ್ಥಳೀಯ ದಾನಿಗಳು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸಿದ್ದರು.