ಉಡುಪಿ: ಕಾರ್ಮಿಕರಿಗೆ ನೀಡುವ ಸ್ಮಾರ್ಟ್ಕಾರ್ಡ್ ನೊಂದಣಿ ಮಾಡಲು ನಿಯೋಜಿಸಿರುವ ಸಂಸ್ಥೆಯು, ಕಾರ್ಮಿಕರಿಂದ ತಲಾ 75 ರೂ ಪಡೆದಿದ್ದು, ಒಂದು ವರ್ಷ ಆದರೂ ಕಾರ್ಡ್ ವಿತರಣೆ ಆಗದಿರುವ ಕುರಿತು ಸೂಕ್ತ ತನಿಖೆ ನಡೆಸಿ ಕಾರ್ಮಿಕರಿಗೆ ಕಾರ್ಡ್ ವಿತರಿಸುವ ವ್ಯವಸ್ಥೆ ಆಗಬೇಕು ಹಾಗೂ ಹಣ ದುರುಪಯೋಗ ಆಗಿದ್ದಲ್ಲಿ ನೌಕರರ ಹಣ ವಾಪಾಸು ನೀಡುವ ವ್ಯವಸ್ಥೆ ಆಗಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ವತ್ತೂರು ಭಾಗದಲ್ಲಿ ನೆರೆ ಪ್ರದೇಶವಾಗಿದ್ದು, ನೀರು ಹರಿದು ಹೋಗಲು ಚರಂಡಿ ಮಾಡಿಕೊಡುವಂತೆ ಕೇಳಿದ್ದರೂ ಈವರೆಗೂ ಯಾವುದೇ ಕಾಮಗಾರಿ ಆರಂಭವಾಗದೇ ಇದ್ದು, ಶೀಘ್ರದಲ್ಲಿ ಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಅಧ್ಯಕ್ಷರು ಸೂಚಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಗ್ರಾಮ ಪಂಚಾಯತ್ ಗಮನಕ್ಕೆ ತರಬೇಕು ಎಂದು ಕಳೆದ ಸಭೆಯಲ್ಲಿ ತಿಳಿಸಿದ ಬಳಿಕವೂ, ಅಧಿಕಾರಿಗಳು ಈ ವಿಷಯವನ್ನು ಪಾಲನೆ ಮಾಡದಿರುವ ಬಗ್ಗೆ ಸಭೆಯಲ್ಲಿ ಜಿ.ಪಂ. ಪಂಚಾಯತ್ ಸದಸ್ಯರು ಆಕ್ಷೇಪಿಸಿದ್ದು, ಇದಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ.ರೂಪೇಶ್ ಪ್ರತಿಕ್ರಿಯಿಸಿ, ಈ ವಿಷಯವಾಗಿ ಕಟ್ಟು ನಿಟ್ಟಿನ ನಿಯಮ ಪಾಲನೆ ಮಾಡುವಂತೆ ಎಲ್ಲಾ ಗ್ರಾಮ ಪಂಚಾಯತ್ಗೆ ತಿಳಿಸಲಾಗಿದೆ ಎಂದರು.
ಪರ್ಕಳ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವ ಬಗ್ಗೆ ಹಿರಿಯಡ್ಕ ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ರಂಜನ್ ಕೇಲ್ಕರ್ ಪ್ರಸ್ತಾಪಿಸಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿ ಪ್ರತಿಕ್ರಿಯಿಸಿ, ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, 2 ತಿಂಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು. ಇದೇ ವೇಳೆ ಹಿರಿಯಡ್ಕ ಕಸ ವಿಲೇವಾರಿ ಘಟಕ ನಿರ್ಮಾಣದ ಅಗತ್ಯತೆ ಕುರಿತು ಚರ್ಚಿಸಿದ್ದು, ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ, ಶೀಘ್ರದಲ್ಲಿ ಕೆಲಸ ಆರಂಭಿಸುವಂತೆ ಸೂಚನೆನೀಡಿದರು.
ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಒಟ್ಟಾರೆ 26 ಬಾಲಕರ ಹಾಗೂ 22 ಬಾಲಕೀಯರ ಶೌಚಾಲಯಗಳ ನಿರ್ಮಾಣವಾಗಬೇಕಿದೆ ಎಂದು ಸದಸ್ಯರು ಪ್ರಸ್ತಾಪಿಸಿದ್ದು, ಅಕ್ಟೋಬರ್ 2 ರೊಳಗೆ ಎಲ್ಲಾ ಶಾಲೆಗಳು ಶೌಚಾಲಯಗಳನ್ನು ನಿರ್ಮಿಸಿ ಈ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಾ ಗಣಪತಿ ದೇವಸ್ಥಾನ ಬಳಿಯ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ದಿನಕರ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಎಸ್ ಕೋಟ್ಯಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಸಿಂಧೂ ಬಿ ರೂಪೇಶ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಯೋಜನಾ ನಿರ್ದೇಶಕ ಮಧುಕರ್ ಉಪಸ್ಥಿತರಿದ್ದರು.