ಕುಂದಾಪುರ: ತಾಲೂಕು ಪಂಚಾಯತ್ ಸಾಮಾನ್ಯ ಸಭೆಗೆ ಬಾರದ ತಹಸೀಲ್ದಾರ್ ವಿರುದ್ದ ಸಿಡಿದೆದ್ದ ಸದಸ್ಯರು

ಕುಂದಾಪುರ: ಪ್ರತೀ ತಾಲೂಕು ಪಂಚಾಯತ್ ಸಭೆಗೂ ತಹಸೀಲ್ದಾರ್ ಗೈರಾಗುತ್ತಿದ್ದಾರೆ. ಈ ದಿನವೂ ಅವರು ಸಭೆಗೆ ಬಂದಿಲ್ಲ. ನಿರಂತರವಾಗಿ ಗೈರಾಗುತ್ತಿದ್ದರೆ ನಮ್ಮ ಪ್ರಶ್ನೆಗಳಿಗೆ ಯಾರ ಬಳಿ ಉತ್ತರ ಪಡೆದುಕೊಳ್ಳುವುದು? ನಿರಂತರವಾಗಿ ಸಭೆಗೆ ಗೈರಾಗುತ್ತಿರುವ ತಹಸೀಲ್ದಾರರ ವಿರುದ್ದ ಕ್ರಮಕೈಗೊಳ್ಳಬೇಕು  ಎಂದು ತಾಲೂಕು ಪಂಚಾಯತ್ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ ಘಟನೆ ಗುರುವಾರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಬುಧವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯ ಆರಂಭಕ್ಕೂ ಮುನ್ನವೇ ತಹಸೀಲ್ದಾರ್ ಸಭೆಗೆ ಗೈರಾಗುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಅರಂಭದಿಂದ ಹಿಡಿದು ಇಲ್ಲಿಯವರೆಗೆ ಕುಂದಾಪುರ ತಹಸೀಲ್ದಾರ್ ನಿರಂತರವಾಗಿ ಗೈರಾಗುತ್ತಿದ್ದಾರೆ.

ಪ್ರತೀ ಸಭೆಯಲ್ಲೂ ತಹಸೀಲ್ದಾರ್ ಸಭೆಗೆ ಕೆರೆಸುವಂತೆ ಕೇಳಿಕೊಂಡರೂ ತಹಸೀಲ್ದಾರ್ ಸಭೆಗೆ ಹಾಜರಾಗದೆ ಸಭೆಗೆ ತಪ್ಪು ಮಾಹಿತಿ ನೀಡಿ, ದಿಕ್ಕು ತಪ್ಪಿಸುತ್ತಿದ್ದಾರೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಉತ್ತರ ಕೊಡುವುದು ಯಾರು. ಸಭೆಗೆ ಗೈರಾಗುತ್ತಿರುವ ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಸರ್ಕಾರ ಹಾಗೂ ಜಿಲ್ಲಾಧಿಕಾರಿಯವರಿಗೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದರು.

ಆಧಾರ್ ಲಿಂಕ್ ವ್ಯವಸ್ಥೆ ಲಿಂಕ್ ತಪ್ಪಿದೆ:

ಸದಸ್ಯ ಮಹೇಂದ್ರ ಪೂಜಾರಿಯವರ ಮಾತಿಗೆ ಸಹಮತ ವ್ಯಕ್ತಪಡಿಸಿ ಮಾತನಾಡಿದ ಸದಸ್ಯ ಜಗದೀಶ್ ದೇವಾಡಿಗ ಬಿಜೂರು, ತಹಸೀಲ್ದಾರ್ ಇಲ್ಲದೆ ಕಂದಾಯ ಇಲಾಖೆ ಸಮಸ್ಯೆ ಅಷ್ಟೇ ಅಲ್ಲಾ. ಬೈಂದೂರು ತಾಲೂಕಿನಲ್ಲಿ ಆಧಾರ್ ಲಿಂಕ್ ವ್ಯವಸ್ಥೆ ಕೂಡಾ ಹಳಿ ತಪ್ಪಿದೆ. ಕುಂದಾಪುರದಲ್ಲಿ ನಾಲ್ಕು ಕಡೆ ಆಧಾರ್ ಲಿಂಕ್ ವ್ಯವಸ್ಥೆ ಇದ್ದರೆ, ಬೈಂದೂರು ತಾಲೂಕಿನಲ್ಲಿ ಒಂದೇ ಕಡೆ ವ್ಯವಸ್ಥೆ ಮಾಡಲಾಗಿದೆ.

ಆಧಾರ ಲಿಂಕ್ ಮಾಡಲು ಜನರು ಪರದಾಡುತ್ತಿದ್ದಾರೆ. ಗ್ರಾಪಂ ಮಟ್ಟದಲ್ಲಿ ಆಧಾರ ಲಿಂಕ್ ಮಾಡಲು ವ್ಯವಸ್ಥೆ ಮಾಡಬೇಕು. ತಹಸೀಲ್ದಾರ್ ಸಭೆಗೆ ಬಾರದೆ ಆಧಾರ ಕಾರ್ಡ್ ಹಾಗೂ ಭೂಮಿ ದಾಖಲಾತಿ ಕೂಡಾ ಸಮಸ್ಯೆ ಆಗುತ್ತಿದೆ. ತಹಸೀಲ್ದಾರ್ ಸಭೆಗೆ ಕಡ್ಡಾಯ ಹಾಜರಿರಬೇಕು. ತಪ್ಪಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ತಹಶೀಲ್ದಾರ್ ವಿರುದ್ದ ಕ್ರಮಕ್ಕೆ ನಿರ್ಣಯ:

ಸದಸ್ಯರಾದ ಮಾಲಿತಿ ಯಡ್ತರೆ, ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ಮಹೇಂದ್ರ ಪೂಜಾರಿ, ಪುಷ್ಪರಾಜ್ ಶೆಟ್ಟಿ, ಜ್ಯೋತಿ ಪುತ್ರನ್, ವಾಸುದೇವ ಪೈ ಸಿದ್ದಾಪುರ ತಹಸೀಲ್ದಾರ್ ಗೈರು ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ನಾಯಿ ಕಚ್ಚಿದ್ದಕ್ಕೆ ಚಿಕಿತ್ಸೆ ಕೊಡೋರಿಲ್ಲ !

ನಾಯಿ ಕಚ್ಚಿದ ವ್ಯಕ್ತಿಯೊಬ್ಬರು ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಬಂದರೆ ಮಧ್ಯಾಹ್ನದ ಮೇಲೆ ನಾಯಿ ಕಚ್ಚಿದ್ದಕ್ಕೆ ಚಿಕಿತ್ಸೆ ಕೊಡೋದಿಲ್ಲ ಎಂದು ಹಿಂದಕ್ಕೆ ಕಳುಹಿಸಿದ್ದಾರೆ. ಹಾಗಾದರೆ ಮಧ್ಯಾಹ್ನದ ಮೇಲೆ ಹುಚ್ಚು ನಾಯಿ ಕಚ್ಚಿದರೆ ಚಿಕಿತ್ಸೆ ಕೊಡೋದಿಲ್ವಾ? ಡಯಾಲಿಸಿಸ್ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಬಂದರೆ ಬೆಡ್ ಇಲ್ಲ ಅಂತ ಹಿಂದಕ್ಕೆ ಕಳುಹಿಸಿದ್ದು, ಅವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಡಯಾಲಿಸಿಸ್ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ. ಚಿಕಿತ್ಸೆ ಪಡೆಯುತ್ತಿರುವವರು ನಿಧನ ಹೊಂದಿದರೆ ಮಾತ್ರ ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಚಿಕಿತ್ಸೆ ನಿರಾಕರಿಸಿದ ವೈದ್ಯರ ವಿರುದ್ಧ ಕ್ರಮಕ್ಕೆ ಸದಸ್ಯ ಕರಣ್ ಪೂಜಾರಿ ಒತ್ತಾಯಿಸಿದರು.

ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡು ಚಿಕಿತ್ಸೆಗೆ ಬರಬೇಕಿತ್ತಾ?
ಹುಚ್ಚು ನಾಯಿ ಕಚ್ಚಿದವರಿಗೆ ಚಿಕಿತ್ಸೆ ನೀಡುವ ಚುಚ್ಚುಮದ್ದು ನಾಲ್ಕು ಜನರಿಗೆ ಕೊಡಬೇಕಾಗುತ್ತದೆ. ಒಬ್ಬರಿಗೆ ಚುಚ್ಚುಮದ್ದು ನೀಡಿದರೆ, ಉಳಿದ ಔಷಧ ಹಾಳಾಗುತ್ತದೆ ಎಂಬ ವೈದ್ಯಾಧಿಕಾರಿ ಹೇಳಿಕೆಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಹುಚ್ಚು ನಾಯಿ ಕಚ್ಚಿದ ವ್ಯಕ್ತಿ ಮತ್ತೆ ಮೂವರಿಗೆ ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡು ಚಿಕಿತ್ಸೆಗೆ ಬರಬೇಕಿತ್ತಾ? ಎಂದು ಸದಸ್ಯರು ಹರಿಹಾಯದ್ದರು. ಹುಚ್ಚು ನಾಯಿ ಕಡಿತಕ್ಕೆ ಔಷಧ ಸಮಸ್ಯೆ ಇಲ್ಲ. ಚಿಕಿತ್ಸೆ ನಿರಾಕರಿಸಿದ ವೈದ್ಯರ ವಿರುದ್ಧ ಕ್ರಮ ಕೂಗೊಳ್ಳಲಾಗುತ್ತದೆ ಎಂದು ಪ್ರಭಾರ ಇಒ ಡಾ.ನಾಗಭೂಷಣ ಉಡುಪ ತಿಳಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ಗುಜ್ಜಾಡಿ, ಕುಂದಾಪುರ ತಾಪಂ ಪ್ರಭಾರ ಇಒ ಡಾ.ನಾಗಭೂಷಣ ಉಡುಪ, ಬೈಂದೂರು ಇಒ ಭಾರತಿ ಇದ್ದರು.