ಉಡುಪಿ: ಯಾರೋ ಕಿಡಿಗೇಡಿಗಳು ಸಿಗರೇಟು ಸೇದಿ ಬಿಸಾಡಿದ ಪರಿಣಾಮ ಗುಡ್ಡಗಾಡು ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡು ಘಟನೆ 80 ಬಡಗಬೆಟ್ಟು ಗ್ರಾಮದ ಮಂಚಿಕೆರೆ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಹುಲ್ಲಿಗೆ ಹತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಕಾಡಿಗೂ ವ್ಯಾಪಿಸಿದೆ. ಸಮೀಪದಲ್ಲಿರುವ ಮನೆಗಳವರೆಗೂ ಬೆಂಕಿ ವ್ಯಾಪಿಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿಯ ಆರ್ಭಟಕ್ಕೆ ಹುಲ್ಲುಗಾವಲು ಹಾಗೂ ಮರಗಿಡಗಳು ಸುಟ್ಟು ಹೋಗಿವೆ.
ಬೆಂಕಿ ಬಿದ್ದದನ್ನು ಕಂಡ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.