ಉಡುಪಿ: ಜಿಲ್ಲೆಯಲ್ಲಿ ಕಳೆದ 6-7 ತಿಂಗಳಿನಿಂದ ಪಡಿತರ ಚೀಟಿ ವಿತರಣೆಯಾಗದೇ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಒತ್ತಾಯಿಸಿದರು.
ಈ ಕುರಿತು ಉತ್ತರಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕುಸುಮಾಧರ್ ಮಾತನಾಡಿ, ಜಿಲ್ಲೆಯಲ್ಲಿ 4771 ಪಡಿತರ ಚೀಟಿ ವಿತರಣೆಗೆ ಮಾರ್ಚ್ 2019 ವರೆಗೆ ಬಾಕಿ ಇದೆ, 6820 ಹೊಸದಾಗಿ ಅರ್ಜಿ ಸಲ್ಲಿಸಿದ್ದು, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಹೊರಗುತ್ತಿಗೆ ಮೇಲೆ ಸಿಬ್ಬಂದಿ ನೇಮಿಸಿಕೊಂಡು ಶೀಘ್ರದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು, ಪಡಿತರ ಚೀಟಿ ಇರದೆ ಇದ್ದರೂ ಸಹ ತಾತ್ಕಾಲಿಕ ಕಾರ್ಡ್‍ನಲ್ಲಿ ಪಡಿತರ ಪಡೆಯಬಹುದು, ಪ್ರಸ್ತುತ ಸಿದ್ಧವಿರುವ ತಾತ್ಕಾಲಿಕ 708 ಕಾರ್ಡ್‍ಗಳನ್ನು ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿದ್ಧವಿರುವ ತಾತ್ಕಾಲಿಕ ಪಡಿತರ ಚೀಟಿಗಳನ್ನು ಸೆಪ್ಟಂಬರ್ 11 ರ ಒಳಗೆ ನೀಡಿ, ಸಂಬಂದಪಟ್ಟ ಜಿ.ಪಂ. ಸದಸ್ಯರಿಗೆ ಮಾಹಿತಿ ನೀಡುವಂತೆ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದರು.
ಹಾವಂಜೆಯಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಭೂಮಿ ಒತ್ತುವರಿ ಆಗಿದೆ ಕೂಡಲೇ ಅದನ್ನು ತೆರವುಗೊಳಿಸುವಂತೆ ಸದಸ್ಯ ಜನಾರ್ಧನ ತೋನ್ಸೆ ತಿಳಿಸಿದರು, ಸದ್ರಿ ಅತಿಕ್ರಮಣವನ್ನು ಕೂಡಲೇ ತೆರವುಗೊಳಿಸುವುದಾಗಿ ತಿಳಿಸಿದ ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್, ತೆರವುಗೊಳಿಸಿದ ನಂತರ ಭೂಮಿಯನ್ನು ಪಂಚಾಯತ್‍ಗೆ ಹಸ್ತಾಂತರಿಸಲಾಗುವುದು, ಪಂಚಾಯತ್‍ನಿಂದ ಸೂಕ್ತ ಬೇಲಿ ನಿರ್ಮಿಸುವಂತೆ ತಿಳಿಸಿದರು.
ಜಿಲ್ಲೆಯ ವಿವಿಧ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಜನ್ಮ ದಿನಾಂಕ ಮತ್ತು ವಿದ್ಯಾರ್ಹತೆಯ ದಾಖಲೆ ಇಲ್ಲದೆ, ಆಧಾರ್ ಕಾರ್ಡ್ ಪಡೆಯಲು ಸಾಧ್ಯವಾಗದೇ ಇದ್ದು, ಇದರಿಂದ ಫಿ.ಎಫ್ ಮುಂತಾದ ಸೌಲಭ್ಯ ಪಡೆಯುವುದು ಕಷ್ಠವಾಗಿದ್ದು, ಈ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸದಸ್ಯೆ ಜ್ಯೋತಿ ಹರೀಶ್ ತಿಳಿಸಿದರು.
ಈ ಕುರಿತು ಉತ್ತರಿಸಿದ ಕುಂದಾಪುರ ಉಪ ವಿಭಾಗಾಧಿಕಾರಿ, ಯಾವುದೇ ದಾಖಲೆ ಇಲ್ಲದೆ ಇರುವ ಕಾರಣ ಸಿವಿಲ್ ನ್ಯಾಯಾಲಯದ ಅನುಮತಿ ಪಡೆದು ಆಧಾರ್ ಕಾರ್ಡ್ ಪಡೆಯಬಹುದು, ಈ ಕುರಿತಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅಗತ್ಯವಿರುವೆಡೆ ಕ್ಯಾಂಪ್‍ಗಳನ್ನು ಏರ್ಪಡಿಸಿ ಅಗತ್ಯ ನೆರವು ಒದಗಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿನ ಬಾಲಕಿಯರ ಹಾಸ್ಟೆಲ್‍ಗಳಲ್ಲಿ ಪುರುಷ ವಾರ್ಡನ್‍ಗಳು ಕಾರ್ಯ ನಿರ್ವಹಿಸುತ್ತಿದ್ದು, ಬಾಲಕಿಯರ ಹಾಸ್ಟೆಲ್‍ಗಳಲ್ಲಿ ಮಹಿಳಾ ವಾರ್ಡನ್‍ಗಳನ್ನು ನೇಮಿಸುವಂತೆ ಹಾಗೂ ಬಾಲಕರ ಹಾಸ್ಟೆಲ್ ನಲ್ಲಿರುವ ಮಹಿಳಾ ವಾರ್ಡನ್‍ಗಳನ್ನು ಬಾಲಕಿಯರ ಹಾಸ್ಟೆಲ್‍ಗೆ ವರ್ಗಾಯಿಸುವಂತೆ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ತಿಳಿಸಿದರು, ಜಿಲ್ಲೆಯಲ್ಲಿ ಹಾಸ್ಟೆಲ್‍ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸದಸ್ಯೆ ಗೀತಾಂಜಲಿ ಸುವರ್ಣ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್ ಕೋಟ್ಯಾನ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಯೋಜನಾ ನಿರ್ದೇಶಕ ಮಧುಕರ್ ಉಪಸ್ಥಿತರಿದ್ದರು.