ಗ್ರಾಹಕರೇ ಬ್ಯಾಂಕ್ ನ ದೇವರು, ಅವರ ಸೇವೆಯೇ ನಮ್ಮ ಗುರಿ: ಡಾ| ಎಂ.ಎನ್‌.ರಾಜೇಂದ್ರಕುಮಾರ್

ಕಾಪು: ಸಹಕಾರಿ ಬ್ಯಾಂಕ್ ಗಳ ಪಾಲಿಗೆ ಗ್ರಾಹಕರೇ ದೇವರುಗಳು, ಅವರ ನಿರಂತರ ಸೇವೆಯೇ ನಮ್ಮ ಗುರಿ. ಜನರಿಗೆ ಉತ್ತಮ ಸೇವೆ ನೀಡಿ ಜನರ ವಿಶ್ವಾಸಕ್ಕೆ ಪಾತ್ರರಾಗಬೇಕು ಎನ್ನುವುದೇ ಬ್ಯಾಂಕ್ ಉದ್ದೇಶ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

ಆ. 26ರಂದು ಕಾಪು ಶ್ರೀ ನಾರಾಯಣ ಗುರು ಸಂಕೀರ್ಣದ ಪ್ರಥಮ ಅಂತಸ್ತಿಗೆ ಸ್ಥಳಾಂತರಗೊಂಡ ಎಸ್‌ಸಿಡಿಸಿಸಿ ಬ್ಯಾಂಕ್‌ನ ಕಾಪು ಶಾಖೆ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕ್ ಗೆ ಗ್ರಾಹಕರೇ ಆಧಾರ ಸ್ತಂಭಗಳು. ಬ್ಯಾಂಕ್ ನ ಅಭಿವೃದ್ಧಿಯಲ್ಲಿ ಪ್ರತಿಯೋರ್ವ ಸಹಕಾರಿಯ ಬೆವರ ಹನಿಯ ಕಾಣಿಕೆಯಿದೆ.
ಪ್ರಸ್ತುತ 106 ವರ್ಷ ಪೂರೈಸಿರುವ ಬ್ಯಾಂಕ್‌ ಗೆ 105 ಶಾಖೆಗಳೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.  ಹೆಚ್ಚುವರಿ ಯಾಗಿ 10 ಶಾಖೆಗಳಿಗೆ ಬೇಡಿಕೆಯಿದ್ದು, ಶೀಘ್ರದಲ್ಲಿ ಹೊಸ ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದವರು ತಿಳಿಸಿದರು.

ರಾಜ್ಯದಲ್ಲಿಯೇ ಬ್ಯಾಂಕ್ ಮುಂಚೂಣಿ:

ನೂತನ ಸ್ಥಳಾಂತರಿತ ಶಾಖಾ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಆ ಮೂಲಕ ಬ್ಯಾಂಕ್‌ ರಾಜ್ಯದಲ್ಲಿಯೇ ಮಂಚೂಣಿಯಲ್ಲಿದೆ ಎಂದರು.

ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಬ್ಯಾಂಕ್ ನ ಸೇವೆಯನ್ನು ಶ್ಲಾಘಿಸಿದರು.

ಕಾಪು ಶ್ರೀ ಹೊಸ ಮಾರಿ ಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರು ಕಾಪು ನೂತನ ಶಾಖೆಯ ಕಚೇರಿಯನ್ನು ಉದ್ಘಾಟಿಸಿದರು. ಭದ್ರತಾ ಕೊಠಡಿ ಯನ್ನು ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಪಿ.ಜಿ. ನಾರಾಯಣ ರಾವ್‌ ಉದ್ಘಾಟಿಸಿದರು.

ಮಾಧವ ಆರ್‌. ಪಾಲನ್‌, ಶೋಭಾ ಪೂಜಾರ್ತಿ, ವಿಕ್ರಂ ಕಾಪು, ಪ್ರವೀಣ್‌ ಬಿ. ನಾಯಕ್‌, ಜಯಕರ ಶೆಟ್ಟಿ ಇಂದ್ರಾಳಿ, ರವೀಂದ್ರ ಬಿ., ಭಾಸ್ಕರ್‌ ಎಸ್‌. ಕೋಟ್ಯಾನ್‌, ಎಂ. ವಾದಿರಾಜ ಶೆಟ್ಟಿ, ಶಶಿಕುಮಾರ್‌ ರೈ ಬಿ., ಕೆ. ಜೈರಾಜ್‌, ರಾಜು ಪೂಜಾರಿ, ಕೋನ್ರಾರ್ಡ್‌ ಕೆಸ್ತಲಿನೋ, ಕಟಪಾಡಿ ಶಂಕರ ಪೂಜಾರಿ, ವೈ. ಸುಧೀರ್‌ ಕುಮಾರ್‌, ಶ್ರೀಧರ ಶೆಟ್ಟಿ, ತಿಮ್ಮ ಪೂಜಾರಿ, ನಾರಾಯಣ ಬಲ್ಲಾಳ್‌ ಮೊದಲಾದವರು ಉಪಸ್ಥಿತರಿದ್ದರು.

ಚೆಕ್‌ ವಿತರಣೆ,ಪುರಸ್ಕಾರ:

ಈ ಸಂದರ್ಭದಲ್ಲಿ 5 ನವೋದಯ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸ ಲಾಯಿತು. 6 ಮಂದಿಗೆ ಚೈತನ್ಯ ವಿಮಾ ಚೆಕ್‌ ವಿತರಿಸಲಾಯಿತು. ವಿಕ್ರಂ ಕಾಪು, ಪ್ರಭೋದ್‌ಚಂದ್ರ ಅವರನ್ನು ಸಮ್ಮಾನಿಸಲಾಯಿತು. ನಿತ್ಯಾನಂದ ಶೇರಿಗಾರ್‌, ಬಾಲಕೃಷ್ಣ ಭಟ್, ಹರಿನಾಥ್‌, ಅನಿತಾ, ಧನಂಜಯ್‌, ದೇವರಾಜ್‌, ಭಾಸ್ಕರ ಕುಮಾರ್‌ ಅವರನ್ನು ಗೌರವಿಸಲಾಯಿತು.

ಐಕಳಬಾವ ಡಾ| ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿದರು. ರಾಜೇಶ್‌ ರಾವ್‌ ಪಾಂಗಾಳ ವಂದಿಸಿದರು. ವಾಲ್ಟರ್‌ ಡೇಸಾ ನಿರೂಪಿಸಿದರು.