ಉಡುಪಿ:ಪೂರ್ವಭಾವಿ ಮರು ಪರೀಕ್ಷೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ-ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್

ಉಡುಪಿ: ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ 2023-24 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ನೇಮಕಾತಿಯ ಪೂರ್ವಭಾವಿ ಮರು ಪರೀಕ್ಷೆಯು ಡಿಸೆಂಬರ್ 29 ರಂದು ಜಿಲ್ಲೆಯಲ್ಲಿ ನಿಗಧಿಪಡಿಸಿರುವ ಒಟ್ಟು 05 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಸದರಿ ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದಿಂದ ಈ ಕೆಳಗಿನಂತೆ ತಿಳಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ತಿಳಿಸಿದ್ದಾರೆ.

ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಂಡ ಪ್ರವೇಶ ಪತ್ರವನ್ನು ಹಾಗೂ ಅಭ್ಯರ್ಥಿಯ ಭಾವಚಿತ್ರವಿರುವ ಮೂಲ ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರುಪಡಿಸಿದ ನಂತರವೇ ಪರೀಕ್ಷಾ ಉಪಕೇಂದ್ರವನ್ನು ಪ್ರವೇಶಿಸಲು ಅನುಮತಿ ನೀಡಲಾಗುವುದು. ಮೂಲ ಗುರುತಿನ ಚೀಟಿ ಹಾಜರುಪಡಿಸದ ಅಭ್ಯರ್ಥಿಗಳಿಗೆ ಪರೀಕ್ಷಾ ಉಪಕೇಂದ್ರವನ್ನು ಪ್ರವೇಶಿಸಲು ಅನುಮತಿ ಇರುವುದಿಲ್ಲ.

ಅಭ್ಯರ್ಥಿಗಳು ಪರೀಕ್ಷಾ ದಿನಗಳಂದು ಬೆಳಗ್ಗಿನ ಹಾಗೂ ಮಧ್ಯಾಹ್ನದ ಅಧಿವೇಶನಗಳ ಪರೀಕ್ಷೆ ಪ್ರಾರಂಭವಾಗುವ 02 ಗಂಟೆ ಮೊದಲು ಕಡ್ಡಾಯವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಮೊಬೈಲ್, ಕ್ಯಾಲ್ಕುಲೇಟರ್, ಸ್ಮಾರ್ಟ್ ವಾಚ್, ಇತ್ಯಾದಿ ಗ್ಯಾಡ್ಜೆಟ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬ್ಯಾಗ್‌ನಲ್ಲಿ ಇರಿಸಿ, ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವಂತಿಲ್ಲ. ಶೂ, ಸಾಕ್ಸ್, ಸ್ವೆಟರ್ ಮತ್ತು ಜರ್ಕಿನ್ ಇತರೆ ವಸ್ತುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದ್ದು, ಸಾಧಾರಣ ಚಪ್ಪಲಿಯನ್ನು ಧರಿಸಿ, ಪರೀಕ್ಷೆಗೆ ಹಾಜರಾಗಬೇಕು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಯಾವುದೇ ಆಧುನಿಕ ಉಪಕರಣಗಳಾದ ಮೊಬೈಲ್, ಬ್ಲೂ ಟುಥ್, ಕ್ಯಾಲ್ಕುಲೇಟರ್, ವೈಟ್ ಫ್ಲೂಡ್, ವೈರ್‌ಲೆಸ್ ಸೆಟ್ಸ್, ಪೇಪರ್, ಬುಕ್ಸ್, ಕಿವಿಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಫೋನ್ ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ತುಂಬು ತೋಳಿನ ಶರ್ಟ್, ಮಂಗಳ ಸೂತ್ರ ಹಾಗೂ ಕಾಲುಂಗುರಗಳನ್ನು ಹೊರತುಪಡಿಸಿ ಯಾವುದೇ ಆಭರಣಗಳನ್ನು, ಜಾಕೆಟ್ಸ್ ಮತ್ತು ಸ್ವೆಟರ್‌ಗಳನ್ನು ಧರಿಸಿ ಹಾಜರಾಗುವುದನ್ನು ಮತ್ತು ಮೆಟಲ್ ವಾಟರ್ ಬಾಟಲ್ಸ್ ಅಥವಾ ನಾನ್ ಟ್ರಾನ್ಸ್ ಪರೆಂಟ್ ವಾಟರ್ ಬಾಟೆಲ್‌ಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಕಿವಿ, ಬಾಯಿಯನ್ನು ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ ಫಿಲ್ಟರ್ ಇರುವ ಫೇಸ್ ಮಾಸ್ಕ್ ಅನ್ನು ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ. ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಸ್ತುಗಳನ್ನು ಧರಿಸಿ ಬರುವ ಅಭ್ಯರ್ಥಿಗಳು ಮತ್ತು ಹಿಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮುಂಚಿತವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಪಡಬೇಕು. ಹಿಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ಎರಡನೇ ಹಂತದಲ್ಲಿ ಪರೀಕ್ಷಾ ತಪಾಸಣೆ ನಡೆಸಿದ ನಂತರ ಎಲ್ಲಾ ಅಭ್ಯರ್ಥಿಗಳ ಗುರುತಿನ ದಾಖಲೆ/ ಚೀಟಿ ಮತ್ತು ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಿ, ನಂತರವೇ ಪರೀಕ್ಷಾ ಉಪಕೇಂದ್ರದ ಒಳಗೆ ಪ್ರವೇಶ ನೀಡಲಾಗುವುದು.

ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗವು 2023-24 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಬಿ ವೃಂದದ ನೇಮಕಾತಿಯ ಪೂರ್ವಭಾವಿ ಮರು ಪರೀಕ್ಷೆಯ ಪ್ರವೇಶ ಪತ್ರವನ್ನು ವೆಬ್‌ಸೈಟ್ http://kpsc.kar.nic.in ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಸದರಿ ಪರೀಕ್ಷೆಯ ವೇಳಾಪಟ್ಟಿಯು ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ತಮ್ಮದೇ ಆದ ಲಿಪಿಕಾರರನ್ನು ಕರೆತರುವ ಅಂಗವಿಕಲ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಲಿಪಿಕಾರರ ಪ್ರವೇಶ ಪತ್ರವನ್ನು ಸಹ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪರಿಷ್ಕೃತ ಪ್ರವೇಶ ಪತ್ರವನ್ನು ಮಾತ್ರ ಪರಿಗಣಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.