ಉಡುಪಿ: ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾದ ಯೋಧ ಅನೂಪ್ ಪೂಜಾರಿ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಕುಂದಾಪುರ ತಾಲೂಕಿನ ಬೀಜಾಡಿ ಕಡಲ ತೀರದಲ್ಲಿ ಇಂದು ನೆರವೇರಿತು.
ಅನೂಪ್ ಪಾರ್ಥಿವ ಶರೀರಕ್ಕೆ ಸೇನಾಧಿಕಾರಿಗಳು, ಯೋಧರು ಗೌರವ ವಂದನೆ ಸಲ್ಲಿಸಿದರು. ಬಳಿಕ ಮೂರು ಸುತ್ತು ಕುಶಾಲ ತೋಪು ಸಿಡಿಸಿ ಪೊಲೀಸ್ ಗೌರವ ಸಲ್ಲಿಸಲಾಯಿತು. ಪತ್ನಿ ಮಂಜುಶ್ರಿಗೆ ತ್ರಿವರ್ಣ ಧ್ವಜ ಹಸ್ತಾಂತರ ಮಾಡಲಾಯಿತು. ಸಮುದ್ರ ತೀರದಲ್ಲಿ ಸಹೋದರ ಶಿವರಾಂ ಅವರು ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
![](https://udupixpress.com/wp-content/uploads/2024/12/1000057284.jpg)
ಪತ್ನಿಯಿಂದ ಕಣ್ಣೀರ ವಿದಾಯ:
ಕಣ್ಣೀರಿಡುತ್ತಾ ಬಂದ ಹುತಾತ್ಮ ಯೋಧ ಅನೂಪ್ ಪೂಜಾರಿ ಪತ್ನಿ ಮಂಜುಶ್ರೀ ಅವರು, ಕೊನೆಯ ಬಾರಿ ಅನೂಪ್ ರನ್ನು ಆಲಂಗಿಸಿ ಮುತ್ತಿಟ್ಟು ಕಣ್ಣೀರ ವಿದಾಯ ಹೇಳಿದರು.
ಅಂತ್ಯಸಂಸ್ಕಾರದ ವೇಳೆ ಸಾವಿರಾರು ಜನ ಭಾಗಿಯಾಗಿದ್ದರು. ಅನೂಪ್ ಪೂಜಾರಿ ಅಮರ್ ರಹೇ, ಭಾರತ್ ಮಾತಾ ಕಿ ಜೈ ಘೋಷಣೆ ಮೊಳಗಿತು.
![](https://udupixpress.com/wp-content/uploads/2024/12/1000057285.jpg)