ಕಾರ್ಕಳ ಡಿಪ್ಲೋಮಾ ಕಾಲೇಜಿನ ಆವರಣದಲ್ಲಿ ಬಂಡೆಗಳನ್ನು ಸ್ಪೋಟಿಸಿ ಕಾಮಗಾರಿ: ವಿದ್ಯಾರ್ಥಿಗಳಿದ್ದರೂ ಕ್ಯಾರೇ ಇಲ್ಲ: ನಮಗೆ ಆರೋಗ್ಯ ಸಮಸ್ಯೆ ಆದ್ರೆ ಯಾರು ಜವಾಬ್ದಾರಿ, ವಿದ್ಯಾರ್ಥಿಗಳ ಪ್ರಶ್ನೆ!

ಕಾರ್ಕಳ: ಕಾಬೆಟ್ಟಿನಲ್ಲಿರುವ ಸರಕಾರಿ ಡಿಪ್ಲೋಮಾ ಕಾಲೇಜು ಆವರಣದಲ್ಲಿ ಕಳೆದ ಕೆಲವು ಸಮಯಗಳಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಲೇಜು ಅಭಿವೃದ್ಧಿಗಾಗಿ ಕೆಲಸಗಳನ್ನು ಕೈಗೊಳ್ಳುತ್ತಿದ್ದರೂ ಹೆಬ್ಬಂಡೆಗಳೇ ಹೇರಳವಾಗಿರುವ ಈ ಜಾಗದಲ್ಲಿ ಹಾಡುಹಗಲೇ ಬಂಡೆಗಳನ್ನು ಸ್ಪೋಟಿಸಿ, ಯಾವ ಮುನ್ನೆಚ್ಚರಿಕೆಯೂ ಇಲ್ಲದೇ ಕಾಮಗಾರಿಗಳನ್ನು ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ, ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದೇ ಆವರಣಕ್ಕೆ ತಾಗಿಕೊಂಡಿರುವ ಸರಕಾರಿ ಪದವಿ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದು ಮೌನವಾಗಿರುವ ಈ ಸ್ಥಳದಲ್ಲಿ ಭಾರೀ ಪ್ರಮಾಣದ ಬಂಡೆಗಳನ್ನು ವಿದ್ಯಾರ್ಥಿಗಳು ಇರುವ ಹೊತ್ತಿನಲ್ಲಿಯೇ ಸಿಡಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.

ಬಂಡೆಗಳ ಸಿಡಿತದ ಸದ್ದಿನಿಂದ ಮೊದಲೇ ಕಿವಿಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಪ್ರವಚನ, ಪರೀಕ್ಷೆ ಓದಿಗೆ ಅಡಚಣೆಯಾಗಿದೆ. ವಿದ್ಯಾರ್ಥಿಗಳ, ಸ್ಥಳೀಯರ ಹಿತದೃಷ್ಟಿಯನ್ನು ಪರಿಗಣಿಸದೇ ಕಾಮಗಾರಿಗಳನ್ನು ನಡೆಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಲಾರಿಗಳ ಧೂಳು, ಅತೀ ವೇಗ, ಕಿವಿಗಡಚಿಕ್ಕುವ ಸದ್ದಿನಿಂದ ನೆಮ್ಮದಿಯೇ ಇಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ಉಡುಪಿxpress ಗೆ ತಿಳಿಸಿದ್ದಾರೆ.