ಕಾರ್ಕಳ: ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸಿ, ಗ್ರಾಮೀಣ ಭಾಗದಲ್ಲಿದ್ದುಕೊಂಡೇ ನಾಡಿನಾದ್ಯಂತ ಶಿಕ್ಷಣದ ಕಂಪನ್ನು ಪಸರಿದ ಹೆಗ್ಗಳಿಕೆ ಕಾರ್ಕಳದ ಕುಕ್ಕುಂದೂರಿನ ಜ್ಞಾನಸುಧಾ ಕಾಲೇಜಿನದ್ದು, ಜ್ಞಾನಸುಧಾ ಎನ್ನುವುದು ಜ್ಞಾನದ ಭಂಡಾರ ಎಂದು ಎಂ.ಆರ್.ಜಿ.ಗ್ರೂಪ್ಗಳ ಸಂಸ್ಥಾಪಕ ಹಾಗೂ ಉದ್ಯಮಿಗಳಾದ ಕೆ. ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ಅವರು ಕಾರ್ಕಳ ಜ್ಞಾನಸುಧಾ ಗಣಿತ ನಗರದ ಕ್ಯಾಂಪಸ್ನಲ್ಲಿ ಡಿ.22ರಂದು ನಡೆದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ, ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಎಲ್ಲೆಲ್ಲೂ ಜ್ಞಾನಸುಧಾ:
ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ರಾಂತಿಗೈಯುವುದು ಸುಲಭದ ಸಾಧನೆಯಲ್ಲ, ಸುಧಾಕರ ಶೆಟ್ಟಿ ಅವರು ಜ್ಞಾನ ಸುಧಾ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದು ದೊಡ್ಡ ಸಾಧನೆ. ಇದೀಗ ಎಲ್ಲೆಡೆಯೂ ಜ್ಞಾನಸುಧಾ ಕಾಲೇಜಿನ ಹೆಸರು ಹಬ್ಬಿದೆ. ಜ್ಞಾನಸುಧಾ ಹೆಸರು ಕೇಳಿದರೂ ಸಾಕು. ಜನ ಜ್ಞಾನಸುಧಾವನ್ನು ಕೊಂಡಾಡುತ್ತಾರೆ, ಇಲ್ಲಿ ನೀಡುವ ಶಿಕ್ಷಣದ ಕುರಿತು ಹೆಮ್ಮೆಪಡುತ್ತಾರೆ, ಇದು ಈ ಶಿಕ್ಷಣ ಸಂಸ್ಥೆಯ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನಸುಧಾದ ಮೂಲಕ ನವಸಾಧಕರು ಹುಟ್ಟುತ್ತಿದ್ದಾರೆ. ಬದುಕಿನ ಸಾಧನೆಗೆ ಶಿಕ್ಷಣ ದಾರಿದೀಪವಾಗಬೇಕು, ದಾರಿದೀಪವಾಗುವ ಕೆಲಸ ಜ್ಞಾನಸುಧಾ ಮಾಡುತ್ತಿದೆ. ಶೈಕ್ಷಣಿಕ ಸಾಧನೆಯ ಜೊತೆಜೊತೆಗೆ ಸಾಮಾನ್ಯ ಜ್ಞಾನವೂ ವಿದ್ಯಾರ್ಥಿಗಳಿಗಿರಲೇಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಶ್ರಮ ಪಟ್ಟರೆ ಖಂಡಿತ ಗೆಲ್ತೀರಿ: ಪ್ರಸನ್ನ ಹೆಚ್.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ತಾಂತ್ರಿಕ ಶಿಕ್ಷಣದ ನಿರ್ದೇಶಕ ಪ್ರಸನ್ನ ಹೆಚ್. ಐ.ಎ.ಎಸ್. ಮಾತನಾಡಿ, ಇದು ಹೇಳಿ ಕೇಳಿ ಸ್ಪರ್ಧಾತ್ಮಕ ಕಾಲ, ಇಲ್ಲಿ ಓಡುವವನಿಗೆ ಮಾತ್ರ ಬೆಲೆ, ನೆಲೆ. ಸತತ ಶ್ರಮ ಹಾಕಿಕೊಂಡು ಮುನ್ನಡೆದರೆ ಸಾಧನೆ ಖಂಡಿತ ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಮಾತು ಅನ್ವಯಿಸುತ್ತದೆ. ವಿದ್ಯಾರ್ಥಿಗಳಿಗೆ ಇಂತಹ ಪರೀಕ್ಷೆಯಲ್ಲಿಯೂ ಬೇಕಾದಷ್ಟು ಅವಕಾಶಗಳಿವೆ. ಸರಿಯಾದ ಸಮಯ ಪಾಲನೆಯಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲ್ಲಬಹುದು. ರಾಜ್ಯದಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ 4.5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು 45,000 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಪಾಸಾಗಿದ್ದಾರೆ. ಪರಿಶ್ರಮ ಪಟ್ಟ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ನೀವೂ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ಸಂಘಟಿತ ಪ್ರಯತ್ನದಿಂದ ಯಶಸ್ಸು: ಶಾಸಕ ವಿ ಸುನಿಲ್ ಕುಮಾರ್
ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಮಾತನಾಡಿ, ಇಂದು ಜ್ಞಾನಸುಧಾ ಹೆಮ್ಮರವಾಗಿ ಬೆಳೆದುನಿಂತಿದೆ. ಪ್ರತೀ ವರ್ಷವೂ ಒಂದಲ್ಲ ಒಂದು ಸಾಧನೆಗಳಿಂದ ಎಲ್ಲರೂ ಜ್ಞಾನಸುಧಾ ಕಾಲೇಜನ್ನು ಬೆರಗುಗಣ್ಣುಗಳಿಂದ ನೋಡುವಂತಾಗಿದೆ. ವೈದ್ಯಕೀಯ ಸೀಟು ಪಡೆಯುವಲ್ಲಿಯೂ ಕಾಲೇಜು ಏರುಗತಿಯಲ್ಲಿ ಕಾಲೇಜು ಸಾಗುತ್ತಿರುವುದು ಸಂತಸ ತಂದಿದೆ, ಇಂತಹ ಯಶಸ್ಸು, ಸಾರ್ಥಕತೆ ಕಾಲೇಜಿಗೆ ಲಭಿಸುವುದಕ್ಕೆ ಅಧ್ಯಕ್ಷರ ಹಾಗೂ ಕಾಲೇಜಿನ ನುರಿತ ಶಿಕ್ಷಕರ ಸಂಘಟಿತ ಪ್ರಯತ್ನವೇ ಕಾರಣ. ಜ್ಞಾನಸುಧಾ ಬರೀ ಶಿಕ್ಷಣವಲ್ಲ, ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಸಂಸ್ಥೆಯ ಪೂರ್ವ ವಿದ್ಯಾರ್ಥಿ ಐ.ಎಂಎಸ್. ಬನಾರಸ್ ,ವಾರಣಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಗೌತಮ್ಭಟ್ ಅವರು, ಮಾತನಾಡಿ, ಜ್ಞಾನಸುಧಾ ಕಾಲೇಜು ನನಗೆ ಬದುಕಿಗೆ ಸ್ಪೂರ್ತಿ ತುಂಬಿ ನನಸಿನ ಹಾದಿಯತ್ತ ಮುನ್ನಡೆಸಿದೆ ಎಂದು, ತಾವು ಕಾಲೇಜಿನಲ್ಲಿ ಕಲಿತ ಆ ದಿನಗಳನ್ನು ಸಭೆಯ ಮುಂದೆ ಮೆಲುಕು ಹಾಕಿದರು.
ವಿದ್ಯಾರ್ಥಿಗಳು ಗೆದ್ದಾಗ ನಿಜಕ್ಕೂ ಸಾರ್ಥಕತೆ: ಡಾ.ಸುಧಾಕರ ಶೆಟ್ಟಿ
ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಬದುಕಿನಲ್ಲಿ ಗೆದ್ದಾಗ, ತಮಗೆ ಸಿಕ್ಕಿದ ಅವಕಾಶಗಳನ್ನು ಶಕ್ತಿಯನ್ನಾಗಿ ಬಳಸಿಕೊಂಡು , ಒಳ್ಳೆಯ ಸ್ಥಾನಕ್ಕೇರಿ, ಸಮಾಜಕ್ಕೆ ಆಸ್ತಿಗಳಾದಾಗ, ತಮ್ಮ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡಾಗ, ಅವರ ತ್ಯಾಗಗಳನ್ನು ಸ್ಮರಿಸಿಕೊಂಡಾಗ ನನಗಾಗುವ ಸಾರ್ಥಕತೆ ಅಷ್ಟಿಷ್ಟಲ್ಲ. ಅದನ್ನು ವರ್ಣಿಸಲು ಸಾಧ್ಯವಿಲ್ಲ. ಜ್ಞಾನಸುಧಾವನ್ನು ಸತತ ಪರಿಶ್ರಮದಿಂದ ಕಟ್ಟಿದ್ದೇವೆ. ಆ ಪರಿಶ್ರಮವನ್ನು ನೆನಪಿಸಿಕೊಳ್ಳುವ ದಿನವಿದು. ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದು ನೋಡಿ ಆನಂದವಾಗಿದೆ ಎಂದರು.
ವಿದ್ಯಾರ್ಥಿವೇತನ ವಿತರಣೆ, ಸನ್ಮಾನ:
2024 ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಅಡ್ವಾನ್ಸ್ ಮೂಲಕ ಐ ಐ ಟಿ ಪ್ರವೇಶ ಪಡೆದ ಮೂವರು ವಿದ್ಯಾರ್ಥಿಗಳನ್ನು, ಜೆ.ಇ.ಇ ಮೈನ್ಸ್ ಮೂಲಕ ಎನ್.ಐ.ಟಿ ಪ್ರವೇಶ ಪಡೆದ ಎಂಟು ವಿದ್ಯಾರ್ಥಿಗಳನ್ನು, ನೀಟ್ ಮೂಲಕ ಎಂ.ಬಿ.ಬಿ.ಎಸ್. ಪ್ರವೇಶ ಗಳಿಸಿದ 155 ವಿದ್ಯಾರ್ಥಿಗಳನ್ನು, ಸಿ. ಎ. ಫೌಂಡೇಶನ್ನಲ್ಲಿ ತೇರ್ಗಡೆಗೊಂಡ ನಾಲ್ವರು ವಿದ್ಯಾರ್ಥಿಗಳನ್ನು, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಸಂಸ್ಥೆಯ ಮೂವರು ವಿದ್ಯಾರ್ಥಿಗಳನ್ನು, ಕಳೆದ ಮೂರು ವರ್ಷಗಳಲ್ಲಿ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಹನ್ನೊಂದು ಪೂರ್ವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರತಿ ಎಂ.ಬಿ.ಬಿ.ಎಸ್ ಸೀಟ್ಗೆ ರೂ.2೦೦೦ ದಂತೆ ಭಾರತೀಯ ಸೆನೆಗೆ ರೂ. 3.10 ಲಕ್ಷ ವನ್ನು ದೇಣಿಗೆಯಾಗಿ ನೀಡಲಾಯಿತು. ಒಟ್ಟು 3 ನೇ ಹಂತದಲ್ಲಿ ರೂ. 7,42,500 ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಉಪನ್ಯಾಸಕಿ ಸಂಗೀತ, ಕಾರ್ಯಕ್ರಮ ನಿರೂಪಿಸಿದರು.