ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಜಾಗೃತಿ ಮೂಡಿಸಿ: ದಿನಕರ ಬಾಬು

ಉಡುಪಿ: ಸ್ವಚ್ಛತೆಯ ವಿಷಯದಲ್ಲಿ ಜಿಲ್ಲೆಯಲ್ಲಿ ಉತ್ತಮ ಕೆಲಸಗಳಾಗಿದ್ದು, ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮಕ್ಕಳಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಿ ಸ್ವಚ್ಛತೆಯ ಜಾಗೃತಿ ಮೂಡಿಸಿದಲ್ಲಿ ಜಿಲ್ಲೆಗೆ ಉತ್ತಮ ಸಂದೇಶ ರವಾನಿಸಿದಂತಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಅವರು ಸೋಮವಾರ ಜಿಲ್ಲಾ ಪಂಚಾಯತ್ ಉಡುಪಿ, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ವತಿಯಿಂದ ಸ್ವಚ್ಛ ಮೇವ ಜಯತೇ ಆಂದೋಲನದ ಅಂಗವಾಗಿ ಸ್ವಚ್ಛತೆ, ಜಲ ಸಂರಕ್ಷಣೆ, ಪರಿಸರ ಸಂರಕ್ಷಣಾ ಜನಜಾಗೃತಿ ಸಲುವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಿದ ಜಿಲ್ಲಾಮಟ್ಟದ ಸ್ವಚ್ಛತಾ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಮ್ಮ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿ, ಇತರರಿಗೆ ಮಾದರಿಯಾದ ಕೊಪ್ಪಳದ ವಿದ್ಯಾರ್ಥಿನಿ ಮಲ್ಲಮ್ಮ ಅವರನ್ನು ಉದಾಹರಣೆಯಾಗಿರಿಸಿಕೊಂಡು ವಿದ್ಯಾರ್ಥಿ ಶಕ್ತಿಯನ್ನು ವಿವರಿಸಿ, ತಮ್ಮ ಮನೆ ಹಾಗೂ ಸುತ್ತಮುತ್ತ ಪರಿಸರದಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಾತನಾಡಿ, ಪರಿಸರ ಮಾಲಿನ್ಯವೇ ಹಲವಾರು ರೋಗ ರುಜಿನಗಳ ಆವಾಸ ಸ್ಥಾನವಾಗಿದ್ದು, ಪರಿಸರ ಸ್ವಚ್ಛತೆಗೆ ಅದ್ಯತೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳು ಮನುಕುಲಕ್ಕೆ ಮಾರಕವಾಗಿದ್ದು, ಸ್ವಚ್ಛಮೇವ ಜಯತೆ ಆಂದೋಲನವು ಸ್ವಚ್ಛತೆಯ ಅಗತ್ಯತೆಯನ್ನು ಹೊಂದಿದೆ. ಸ್ವಚ್ಛತೆಯನ್ನು ಕಾಪಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಹೆಗಲ ಮೇಲಿದೆ. ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ಇತರ ಜಿಲ್ಲೆಗಳಿಗೆ ಮಾದರಿಯಾಗಿದ್ದು, ಈ ನಿಟ್ಟಿನಲ್ಲಿ ನಗರ-ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ.

ಉಡುಪಿ ವಂಡ್ಸೆಯ ಘನ ದ್ರವ ತ್ಯಾಜ್ಯ ನಿರ್ವಹಣಾ ಘಟಕದ ಪ್ರೇರಣೆಯಿಂದ ಕೋಲಾರದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಆರಂಭಿಸಲಾಗಿದೆ ಎಂದರು. ಕಸದ ಉತ್ಪತ್ತಿ ನಮ್ಮಿಂದಲೇ ಆಗುತ್ತಿರುವಾಗ ಅದರ ವಿಲೇವಾರಿಯೂ ನಮ್ಮಿಂದಲೇ ಆಗಬೇಕಾಗಿದ್ದು, ಸ್ವಚ್ಚತೆಯನ್ನು ಕಾಪಾಡದಿದ್ದಲ್ಲಿ ಮುಂದಿನ ಪೀಳಿಗೆಗೆ ಸಂಕಷ್ಟ ತಪ್ಪಿದ್ದಲ್ಲ ಎಂದ ಅವರು ಯಾವುದೇ ಕಾರಣಕ್ಕೂ ಕಸವನ್ನು ಬೀದಿಗೆ ಎಸೆಯಬಾರದು, ವಿದ್ಯಾರ್ಥಿಗಳು ಸ್ವಚ್ಚತೆಯ ರಾಯಭಾರಿಗಳಾಗಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.

ವಾಲ್ನಟ್ ನಾಲೆಡ್ಜ್ ಸೊಲ್ಯೂಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಆಯೋಜಿಸಿದ್ದು, ಸಂಸ್ಥೆಯ ಪ್ರತಿನಿಧಿ ಅನಘಾ ಶ್ರೀಧರ್ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ  161 ಶಾಲೆಯ 205 ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಯೋಜನಾ ನಿರ್ದೇಶಕ ಸುಬ್ರಮಣ್ಯ ಜೋಶಿ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು, ಪಿಡಿಒ ಮಹೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.