ಬಾದಾಮಿ, ಐಹೊಳೆಗೆ ಹೋಗೋಕೆ ಇದೊಳ್ಳೆ ಸಮಯ: ಟ್ರಿಪ್ ಪ್ಲಾನ್ಸ್ ಹೇಗೆ ಮಾಡ್ಬೇಕು ಇಲ್ಲಿದೆ ವಿವರ!

writeup: suvarchala bs

ಕರ್ನಾಟಕದ ಪ್ರಸಿದ್ಧ ರಾಜಮನೆತನಗಳಲ್ಲಿ ಒಂದು ಚಾಲುಕ್ಯ ವಂಶ. ಶಿಲ್ಪಕಲೆಗೆ ಹೆಸರಾದ ಈ ಮನೆತನದ ರಾಜರುಗಳು ಶಿಲ್ಪಿಗಳಿಗೆ ಅಪಾರ ಪ್ರೋತ್ಸಾಹ ನೀಡಿದಾರೆ. ಐಹೊಳೆಯನ್ನ ಶಿಲ್ಪಕಲೆಯ ಪ್ರಯೋಗಶಾಲೆ ಎಂದೇ ಕರೆದಿದ್ದಾರೆ‌. ಇಲ್ಲಿ ಹಲವಾರು ಸ್ಮಾರಕಗಳ ಸಮುಚ್ಛಯವಿದೆ. ಹಾಗೇ ಪಟ್ಟದಕಲ್ಲು ಪ್ರಯೋಗಶಾಲೆಯಲ್ಲಿ ಪ್ರಯೋಗ ಮಾಡಿ ಪರಿಣಿತಿ ಹೊಂದಿದ ನಂತರ ಶಿಲ್ಪಿಗಳು ಪ್ರಬುದ್ಧರಾಗಿ ನಿರ್ಮಿಸಿದ ಶಿಲ್ಪಕಲೆ ಇಲ್ಲಿದೆ. ಬಾದಾಮಿ ಗುಹಾಂತರ ದೇವಾಲಯಗಳಿಗೆ ಪ್ರಸಿದ್ಧಿ ಪಡೆದಿದೆ.

ಎರಡು ದಿನಗಳ ಟ್ರಿಪ್ ಪ್ಲಾನ್

ಬಾದಾಮಿಯಲ್ಲಿ ರೂಮ್ ಮಾಡಿ ಉಳಿದುಕೊಳ್ಳೋದು ಬೆಸ್ಟ್ ಐಡಿಯಾ. ಅಲ್ಲಿ ಪ್ರೈವೇಟ್ ಲಾಡ್ಜ್ ಗಳಲ್ಲದೇ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಮಯೂರ ಚಾಲುಕ್ಯದಲ್ಲಿ ಕೂಡಾ ರೂಮ್ ಗಳು ರೀಸನೇಬಲ್ ಪ್ರೈಸ್ ನಲ್ಲಿ ಸಿಗತ್ತೆ. ಮೊದಲನೇ ದಿನ ನೇರವಾಗಿ ಐಹೊಳೆಗೆ ಹೋಗಿ ಅರ್ಧ ದಿನದಲ್ಲಿ ಎಲ್ಲಾ ಸ್ಥಳಗಳನ್ನ ನೋಡ್ಬೋದು ನಂತರ ಪಟ್ಟದಕಲ್ಲಿಗೆ ಬಂದು ಅಲ್ಲಿರುವ ಖಾನಾವಳಿಗಳಲ್ಲಿ ಊಟ ಮಾಡಿ ಮಧ್ಯಾನದ ಒಂದೆರಡು ಗಂಟೆಗಳನ್ನು ಅಲ್ಲಿ ಕಳೀಬೋದಾಗಿದೆ. ನಂತರ ಟೈಮ್ ಉಳಿದ್ರೆ ಮಹಾಕೂಟ ಹಾಗೂ ಬನಶಂಕರಿ ದೇಗುಲಗಳ ದರ್ಶನ ಮಾಡಿಕೊಂಡು ಬಾದಾಮಿಗೆ ಹಿಂದಿರುಗಬಹುದಾಗಿದೆ.

ಎರಡನೇ ದಿನ ಬಾದಾಮಿಯ ಗುಹಾಂತರ ದೇಗುಲಗಳನ್ನು, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಬೋದು. ಅನಂತರ ಅಗಸ್ತ್ಯ ಸರೋವರ, ಭೂತನಾಥ ದೇವಾಲಯ, ಮ್ಯೂಸಿಯಂ, ಕೆಳಗಿನ ಶಿವಾಲಯ, ಮೇಲಿನ ಶಿವಾಲಯಗಳನ್ನು ಮಧ್ಯಾನದ ಮೂರು ಗಂಟೆ ಒಳಗೆ ನೋಡಿ ಮುಗಿಸ್ಬೋದು. ಎಲ್ಲಾ ಕಡೆಗಳಲ್ಲೂ ಗೈಡ್ ಇರ್ತಾರೆ. ಪ್ರಾಚ್ಯವಸ್ತು ಇಲಾಖೆ ಈ ಸ್ಮಾರಕಗಳನ್ನು ನೋಡಿಕೊಳ್ಳೋದ್ರಿಂದ ಸಣ್ಣ ಎಂಟ್ರಿ ಫೀಸ್ ಇದೆ ಹಾಗೂ ತುಂಬಾ ಚೆನ್ನಾಗಿ ಮೈಂಟೇನ್ ಕೂಡಾ ಮಾಡಿದಾರೆ.

ಸಾಮಾನ್ಯವಾಗಿ ಮಳೆ‌ ಮುಗಿದ ನಂತರ ಅಕ್ಟೋಬರ್ ನಿಂದ ಫೆಬ್ರವರಿವರೆಗೆ ಬಿಸಿಲಿನ ತೀವ್ರತೆ ಕಡಿಮೆ ಇರೋದ್ರಿಂದ ಈ ಟೈಮ್ ನಲ್ಲೇ ವಿಸಿಟ್ ಮಾಡಿ. ಬಿಸಿಲಿನ ನಡುವೆಯೂ ಇಲ್ಲಿನ ಶಿಲ್ಪಕಲೆಯ ಸೌಂದರ್ಯವನ್ನು ಅನುಭವಿಸುತ್ತಾ ಕಳೆದು ಹೋಗುವ ಅವಕಾಶವನ್ನ ಮಿಸ್ ಮಾಡ್ಕೋಬೇಡಿ. ಆದಷ್ಟು ಬೇಗ ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ಟೂರ್ ಪ್ಲಾನ್ ಮಾಡಿ. ಹಾಗೇ ಅಲ್ಲಿನ ಖಾನಾವಳಿಗಳಲ್ಲಿ ಉತ್ತರ ಕರ್ನಾಟಕ ಶೈಲಿಯ ಊಟ ಮಾಡೋದನ್ನು ಮರೀಬೇಡಿ