ಮಂಗಳೂರು: ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಸುಮಾರು 190ಕ್ಕೂ ಹೆಚ್ಚು ಸಂತ್ರಸ್ತರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ 22 ಲಕ್ಷ ರೂ. ಅಧಿಕ ಮೊತ್ತದ ಪರಿಹಾರದ ಚೆಕ್ ವಿತರಿಸಿದರು.
ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಇರುವ ನಂದಿನಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಅನಂತರ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಹಿಂದಿನ ರಾಜ್ಯ ಸರಕಾರದಲ್ಲಿ ಮಳೆಯಿಂದ ಮನೆಯ ಒಳಗೆ ನೀರು ನುಗ್ಗಿ ಆಗುವ ಹಾನಿಗೆ ಕೇವಲ 3,800 ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ಆದರೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಮೇಲೆ ಅದನ್ನು ಹತ್ತು ಸಾವಿರ ರೂಪಾಯಿಗೆ ಏರಿಸಿದ್ದಾರೆ. ಅದೇ ರೀತಿಯಲ್ಲಿ ಪ್ರಕೃತಿ ವಿಕೋಪದಿಂದ ಮನೆ ಸಂಪೂರ್ಣ ಹಾನಿಯಾದರೆ ಹಿಂದಿನ ರಾಜ್ಯ ಸರಕಾರ ಕೇವಲ 95,100 ರೂಪಾಯಿ ಪರಿಹಾರ ನೀಡುತ್ತಿತ್ತು. ಇದರಿಂದ ಹೊಸ ಮನೆ ಕಟ್ಟಲು ಸಾಧ್ಯವಿಲ್ಲದೆ ಜನರು ಪೇಚಾಟಪಡುತ್ತಿದ್ದರು. ಆದರೆ ಯಡಿಯೂರಪ್ಪ ಸರಕಾರ ಪರಿಹಾರದ ಮೊತ್ತವನ್ನು ಹೆಚ್ಚಿಸಿದೆ ಎಂದರು.
ಜಪ್ಪಿನಮೊಗರು ಪ್ರದೇಶದಲ್ಲಿ ನದಿತೀರದಲ್ಲಿದ್ದ 9 ಮನೆಗಳಿಗೆ ಸಂಪೂರ್ಣ ಹಾನಿ ಸಂಭವಿಸಿದೆ. ಅವರಿಗೆ ಜಪ್ಪಿನಮೊಗರು ವಾರ್ಡಿನಲ್ಲಿಯೇ ಇನ್ನೊಂದು ಕಡೆ ಜಾಗ ಗುರುತಿಸಿ ಮನೆ ನಿರ್ಮಿಸಲಾಗುವುದು ಎಂದು ತಿಳಿಸಿದ ಶಾಸಕ ಕಾಮತ್ ಅವರು ಸಂತ್ರಸ್ತರೊಂದಿಗೆ ತಾವು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರು ಇದ್ದೇ ಇರುತ್ತೇವೆ ಎಂದು ತಿಳಿಸಿದರು.
ಪದವು, ಜಪ್ಪಿನಮೊಗರು, ಬಜಾಲ್, ಬೆಂಗ್ರೆ, ಬೋಳುರು ಸಹಿತ ಕೆಲವು ಪ್ರದೇಶಗಳ ಸಂತ್ರಸ್ತರಿಗೆ ಸೋಮವಾರ ಪರಿಹಾರದ ಚೆಕ್ ವಿತರಿಸಲಾಯಿತು.
ಇದಕ್ಕಾಗಿ ಶ್ರಮ ವಹಿಸಿದ ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳನ್ನು ಮುಖ್ಯಮಂತ್ರಿಯವರ ಪರವಾಗಿ ಮತ್ತು ಶಾಸಕನ ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದರು.
ಒಟ್ಟು 190ಕ್ಕೂ ಕುಟುಂಬಗಳಿಗೆ ಹತ್ತು ಸಾವಿರದಂತೆ 21.40 ಲಕ್ಷ ಮತ್ತು 95 ಸಾವಿರದಂತೆ ಐದು ಮನೆಗಳಿಗೆ ಪರಿಹಾರದ ಚೆಕ್ ಅನ್ನು ಶಾಸಕ ಕಾಮತ್ ವಿತರಿಸಿದರು. ತಮ್ಮ ವಾರ್ಡ್ ಗಳಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ಸಿಗದೇ ಇದ್ದಲ್ಲಿ ತಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ಮಾಹಿತಿ ನೀಡಬೇಕು ಎಂದು ಶಾಸಕ ಕಾಮತ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಪಾಲಿಕೆಯ ಮಾಜಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು.