ಗ್ರಾಪಂ ಅಧ್ಯಕ್ಷರ, ಉಪಾಧ್ಯಕ್ಷರ, ಸದಸ್ಯರ ಗೌರವಧನ ಹೆಚ್ಚಿಸಿ: ಎಂಎಲ್ ಸಿ ಡಾ. ಧನಂಜಯ ಸರ್ಜಿ ಒತ್ತಾಯ

ಬೆಂಗಳೂರು: ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನವನ್ನು ಕನಿಷ್ಠ ಎರಡು ಪಟ್ಟು ಹೆಚ್ಚಿಸುವಂತೆ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಅವರು ಸರ್ಕಾರವನ್ನು ಒತ್ತಾಯಿಸಿದರು.

ಚಳಿಗಾಲದ 154ನೇ ವಿಧಾನ ಪರಿಷತ್ ಅಧಿವೇಶನದಲ್ಲಿ ಮಾತನಾಡಿದ ಅವರು, ದೇಶದ 141 ಕೋಟಿ ಜನಸಂಖ್ಯೆಯಲ್ಲಿ ಶೇ.65 ರಷ್ಟು ಜನ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಗಾಂಧೀಜಿ ಅವರ ಕನಸು ಗ್ರಾಮಗಳು ಉದ್ದಾರವಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಗ್ರಾಮ ಸ್ವರಾಜ್ಯ ಕನಸು ನಿಜವಾಗಬೇಕಾದರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನವನ್ನು ಹೆಚ್ಚಿಸಬೇಕು ಜೊತೆಗೆ ಗ್ರಾಮ ಪಂಚಾಯಿತಿಗಳಿಗೆ ಕೊಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಬಿ ಕೆಟಗರಿ ಗ್ರಾಮ ಪಂಚಾಯಿತಿಗಳಿಗೆ ಅಂದಾಜು 20 ಲಕ್ಷ ಅನುದಾನ ಬಂದರೆ, ಆ ಅನುದಾನದಲ್ಲಿಯೇ ಅವರು ವಿದ್ಯುತ್ ಬಿಲ್ ಪಾವತಿ ಮಾಡಬೇಕು, ನೀರಿನ ತೆರಿಗೆಯನ್ನು ಕಟ್ಟಬೇಕು ಜೊತೆಗೆ ಗುತ್ತಿಗೆ ಆಧಾರದ ಮೇಲೆ ಅವರು ನೀರು ಗಂಟಿಗಳನ್ನು, ತೆರಿಗೆ ಸಂಗ್ರಹಕಾರರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ.

ನೀವು ಗ್ರಾಮಪಂಚಾಯಿತಿಗಳಿಗೆ ಕೊಡುತ್ತಿರುವ ಅನುಧಾನ ಹಾಗೂ ಗ್ರಾಮಪಂಚಾಯಿತಿಯ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಳ ಮಾಡಿದರೆ ಅವರಿಗೂ ಸಂಬಳ ಕೂಡ ಹೆಚ್ಚಿನ ಮಟ್ಟದಲ್ಲಿ ಕೊಡವುದಕ್ಕೆ ಅನುಕೂಲವಾಗುತ್ತದೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಕೂಡ ಭರ್ತಿ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸರ್ಜಿ ಅವರ ಪ್ರಶ್ನೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಸಾಧ್ಯವಾದರೆ ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುವುದಾಗಿ ಸದನದಲ್ಲಿ ಆಶ್ವಾಸನೆ ನೀಡಿದರು.