ಮೂಡುಬಿದಿರೆ: (ವಿದ್ಯಾಗಿರಿ): ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುವ 30 ನೇ ವರ್ಷದ ‘ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಮಂಗಳವಾರ ಅದ್ದೂರಿ ಚಾಲನೆ ನೀಡಲಾಯಿತು.
ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟನೆ ನೆರವೇರಿಸಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ದಂಪತಿ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಮುಂಬಯಿ ಹೇರಂಭಾ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಆನುವಂಶಿಕ ಮೊಕ್ತೇಸರ ಲಕ್ಷ್ಮೀ ನಾರಾಯಣ ಅಸ್ರಣ್ಣ, ಶಾರದಾ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಎಂ.ಬಿ.ಪುರಾಣಿಕ, ಬರೋಡ ಶಶಿ ಕೇಟರಿಂಗ್ ಸರ್ವೀಸಸ್ ಆಡಳಿತ ನಿರ್ದೇಶಕ ಶಶಿಧರ ಶೆಟ್ಟಿ, ಬೆಂಗಳೂರು ಕೆ.ಎಲ್.ಎನ್. ಎಂಜಿನಿಯ ರಿಂಗ್ ಆಡಳಿತ ನಿರ್ದೇಶಕ ಪ್ರಸನ್ನ ಕುಮಾರ್ ಶೆಟ್ಟಿ,, ಬಳ್ಳಾರಿ ಕುಮಾರಸ್ವಾಮಿ ಮಿನರಲ್ ಎಕ್ಸ್ ಪೋರ್ಟ್ ನ ಎಂ.ರವೀಂದ್ರನಾಥ ಆಳ್ವ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕಲ್ಕೂರ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, , ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕು. ರಾಧಾ, ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯೂಸ್ ಆಡಳಿತ ನಿರ್ದೇಶಕ ಕೆ. ಶ್ರೀಪತಿ ಭಟ್, ಕೆನರಾ ಬ್ಯಾಂಕಿನ ಸುಧಾಕರ್ ಕೊಠಾರಿ, ಪ್ರಮುಖವಾದ ಜಯಶ್ರೀ ಅಮರನಾಥ ಶೆಟ್ಟಿ, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ತಿಮ್ಮಯ್ಯ ಶೆಟ್ಟಿ, ರಾಮಯ್ಯ ಶೆಟ್ಟಿ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., ಮಂಗಳೂರು ಭಾರತ್ ಇನ್ಫ್ರಾಟೆಕ್ನ ಮುಸ್ತಾಫ ಎಸ್.ಎಂ, ಮೂಡುಬಿದಿರೆ ಬಿಮಲ್ ಕನ್ಸ್ಟ್ರಕ್ಷನ್ ನ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಭವ್ಯ ಸಾಂಸ್ಕೃತಿಕ ಮೆರವಣಿಗೆ ಮತ್ತು ರಥ ಸಂಚಲನಕ್ಕೆ ಮೂಡಬಿದ್ರೆ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ, ವಜ್ರದೇಹಿ ರಾಜಶೇಖ ರಾನಂದ ಸ್ವಾಮೀಜಿ, ಕೊಂಡೆ ವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಕಟೀಲು ಲಕ್ಷ್ಮಿ ನಾರಾಯಣ ಆಸ್ರಣ್ಣ ಚಾಲನೆ ನೀಡಿದರು.
ಆರಂಭದಲ್ಲಿ ಗಿರಿಧರ್ ಅವರ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಮೂಡಿದ ‘ಬೆಳಕಾಗಿ ಬಾ’ ಹಾಗೂ ಡಾ.ಎನ್.ಕೆ. ಪದ್ಮನಾಭ ವಿರಚಿತ ‘ಪರಹಿತ ಬಯಸೋ’ ಪ್ರಾರ್ಥನೆಯನ್ನು ಹಾಡಲಾಯಿತು. ಆಳ್ವಾಸ್ ವಿರಾಸತ್ 30ನೇ ವರ್ಷದ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯು ಹೊರತಂದಿರುವ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜಾನಪದ ಕಲಾತಂಡಗಳ ಮೆರವಣಿಗೆ- ರಥಾರತಿ
ಸಭಾ ಕಾರ್ಯಕ್ರಮದ ಬಳಿಕ 140ಕ್ಕೂ ಅಧಿಕ ದೇಶಿಯ ಜಾನಪದ ಕಲಾ ತಂಡಗಳಿಂದ ಕೂಡಿದ 3000ಕ್ಕೂ ಅಧಿಕ ಕಲಾವಿದರನ್ನು ಒಳಗೊಂಡ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಬಳಿಕ ವೇದಘೋಷ, ಭಜನೆ, ಪುಷ್ಪ ಪಲ್ಲಕಿಗಳು, ಮಂಗಳ ವಾದ್ಯಗಳೊಂದಿಗೆ ವಿನಾಯಕ, ಸರಸ್ವತಿ, ಲಕ್ಷ್ಮಿ, ಹನುಮಂತ, ಶ್ರೀರಾಮ, ಶ್ರೀಕೃಷ್ಣ ದೇವರಿಂದ ಕೂಡಿದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಹಾಗೂ ರಥಾರತಿ ನಡೆಯಿತು.
ಡಿ. 11ರಂದು ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ
ಆಳ್ವಾಸ್ ವಿಸಾಸತ್ 2024 ಪ್ರಶಸ್ತಿ ಪ್ರದಾನ 2024ನೆ ಸಾಲಿನ ಸಾಲಿನ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ರಿಗೆ ಡಿ. 11ರಂದು ಸಂಜೆ 5.45ರಿಂದ 6.30ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಬಳಿಕ ಪದ್ಮಶ್ರೀ ಪಂ. ವೆಂಕಟೇಶ್ ಕುಮಾರ್ ಮತ್ತು ಬಳಗದವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಲಿದ್ದಾರೆ. ರಾತ್ರಿ 7.45ರಿಂದ ಗುಜರಾತ್ನ ರಂಗ್ ಮಲ್ಟರ್ ದಿ ಫೋಕ್ ಆರ್ಟ್ಸ್ ತಂಡದಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ ರಾತ್ರಿ 9ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರಸ್ತುತಗೊಳ್ಳಲಿದೆ. ಸಾಂಸ್ಕೃತಿಕ ಸಂಪತ್ತು ಹೆಚ್ಚಾದಾಗ ಮನಸ್ಸು ಅರಳುತ್ತದೆ. ಸಮಾಜ ದ ಒಳ್ಳೆಯದನ್ನು ಒಪ್ಪಿಕೊಂಡು ಅಪ್ಪಿ ಕೊಂಡು, ಆ ಹಾದಿಯಲ್ಲಿ ಸಮಾಜ, ದೇಶ ಬೆಳೆಯಬೇಕು ಎಂದು ಆಳ್ವಾಸ್ ವಿರಾಸತ್ 2024 ಉದ್ಘಾಟನೆ ನೆರವೇರಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ವಿಶ್ವವನ್ನೇ ಹೃದಯದಲ್ಲಿ ತುಂಬುವ ಹಬ್ಬವೇ ‘ವಿರಾಸತ್’ ಎಂದು ಬಣ್ಣಿಸಿದ ಅವರು ನಾವೂ ಪ್ರಕೃತಿಯನ್ನು, ಹೃದಯವನ್ನು ಅರಳಿಸಬೇಕು ಎಂದರು.
ನಮ್ಮ ಸಂಸ್ಕೃತಿಯ ಮೂಲ ಸ್ವರೂಪ ರಕ್ಷಣೆ ಮಾಡಬೇಕಾದರೆ ಶ್ರಮ ವಹಿಸಬೇಕು. ಅದು ಮೋಹನ್ ಆಳ್ವರಿಂದ ಸಾಧ್ಯ. ಅವರು ಹೃದಯ ವೈಶಾಲ್ಯ ಉಳ್ಳವರು. ವಿರಾಸತ್ ಕಲ್ಪನೆ ಮೂಲಕ ನಮ್ಮನ್ನು ಸಂತೋಷ ಪಡಿಸುತ್ತಾರೆ. ಇಂತಹ ಹೃದಯ ವೈಶಾಲ್ಯ ತೆ ಉಳ್ಳವರ ಸಂಖ್ಯೆ ಹೆಚ್ಚಾಗಬೇಕು ಎಂದು ಅವರು ಆಶಯ ವ್ಯಕ್ತ ಪಡಿಸಿದರು.
ಡಾ. ಮೋಹನ್ ಆಳ್ವ ತಮ್ಮ ದೃಷ್ಟಿಕೋನವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಎಂಬ ಕ್ರಿಯೆಯ ಮೂಲಕ ಸಾಕಾರಗೊಳಿ ಸಿದ್ದಾರೆ ಎಂದು ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಆರ್.ಜಿ. ಗ್ರೂಪ್ನ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ 500 ಮಂದಿಯೊಂದಿಗೆ ಊರಿಗೆ ಸೀಮಿತವಾಗಿ ಆರಂಭ ಗೊಂಡ ವಿರಾಸತ್ 30 ವರ್ಷಗಳಲ್ಲಿ 50000 ಕೂ ಅಧಿಕ ಪ್ರೇಕ್ಷಕ ರೊಂದಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆ ದಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಯುವ ಸಂಪತ್ತು ಕಲಿಕಾ ವಿಧಾನದಲ್ಲಿ ಹಿಂದೆ ಬೀಳದ ಜೊತೆ ಪೂರಕ ಪಠ್ಯ ಚಟುವಟಿಕೆ ಯೊಂದಿಗೆ ಸುಂದರ ಮನಸ್ಸು ಕಟ್ಟುವ ಜೊತೆ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಮುನ್ನಡೆಯುತ್ತಿದೆ. ಈ ಬಾರಿ ಒಲಿಂಪಿಕ್ ಗೆ ಹೋದವರಲ್ಲಿ 5 ಮಂದಿ ನಮ್ಮ ಸಂಸ್ಥೆಯವರು ಎಂಬುದು ನಮ್ಮ ಹೆಮ್ಮೆ. ಮಂಗಳೂರು ವಿಶ್ವ ವಿದ್ಯಾನಿಲಯದ 73 ವರ್ಷಗಳ ಇತಿಹಾಸದಲ್ಲಿ ಅಥ್ಲೆಟಿಕ್ ನಲ್ಲಿ 49 ದಾಖಲೆಗಳಿದ್ದು, ಅವೆಲ್ಲಾ ದಾಖಲೆ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿರುವುದಾಗಿದೆ ಎಂದು ಹೇಳಿದರು.
ಅನ್ವೇಷಣಾತ್ಮಕ ಶತಾಯುಷಿ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಕೃಷಿಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳಗಳೂ ಮಂಗಳವಾರ ಬೆಳಿಗ್ಗೆ ಉದ್ಘಾಟನೆಗೊಂಡಿದ್ದು, ಡಿ.15ರ ವರೆಗೆ ನಡೆಯಲಿವೆ. 30ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಸಮಾರಂಭದಲ್ಲಿ ಪುತ್ತೂರು ಅಂಚೆ ವಿಭಾಗವು ವಿಶೇಷವಾದ ಅಂಚೆ ಲಕೋಟೆಯನ್ನು ಮಂಗಳವಾರ ಬಿಡುಗಡೆ ಗೊಳಿಸಿತು.
ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ಲಕೋಟೆಯನ್ನು ಅಂಚೆ ಕಚೇರಿಯ ಮಳಿಗೆಯಲ್ಲಿ ಬಿಡುಗಡೆ ಮಾಡಿ ಮಾತನಾಡಿ, ಜ್ಞಾನ ಜಾತ್ರೆ, ಜ್ಞಾನ ಯಾತ್ರೆಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಸವಿ ನೆನಪಿಗಾಗಿ ಬಿಡುಗಡೆಯಾಗುತ್ತಿರುವ ವಿಶೇಷ ಅಂಚೆ ಲಕೋಟೆಯು ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ ಎಂದರು. ವೇದಿಕೆಯಲ್ಲಿ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸ್ಕೌಟ್ ಗೈಡ್ಸ್ ನ ರಾಜ್ಯ ಸಂಚಾಲಕ ಪಿ.ಜಿ.ಆರ್. ಸಿಂಧ್ಯಾ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಕುರಿಯನ್, ಬಂಟ್ವಾಳ ಸಹಾಯಕ ಅಂಚೆ ಅಧೀಕ್ಷಕ ಪ್ರಹ್ಲಾದ್ ನಾಯಕ್, ಕಾರ್ಕಳ ಸಹಾಯಕ ಅಂಚೆ ಅಧೀಕ್ಷಕ ಮೋಹನ್ ಹಾಗೂ ಇತರರು ಹಾಜರಿದ್ದರು.