ಡಾಕ್ಟರ್ ಆಗಬೇಕೆನ್ನೋ ಕನಸು ಕಂಡಿದ್ದ ಎಸ್ ಎಂ‌ ಕೃಷ್ಣ ಕೊನೆಗೆ ಆದದ್ದೇ ಬೇರೆ :ಎಸ್ ಎಂ ಕೃಷ್ಣ ಆತ್ಮಚರಿತ್ರೆಯಲ್ಲೇನಿದೆ?

ಮೇ 1, 1932 ರಲ್ಲಿ ಏಳು ಹೆಣ್ಣು ಮಕ್ಕಳ ನಂತರ ಎಂಟನೆಯವರಾಗಿ ಜನಿಸಿದವರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (SM Krishna) ತಮ್ಮ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡು ಪೂರೈಸಿದ್ದರು. ಬಾಲ್ಯದಲ್ಲಿ ತುಂಟ ಕೃಷ್ಣನಾಗಿದ್ದ ಇವರು ಗುರುಗಳಿಂದ ಸದಾ ಶಿಕ್ಷೆ, ಪೆಟ್ಟುಗಳನ್ನು ಪಡೆಯುತ್ತಿದ್ದರಂತೆ. ಅಲ್ಲಿನ ಸಂಸ್ಕಾರಗಳೇ ಅವರ ಜೀವನ ಈ ಮಟ್ಟದಲ್ಲಿ ಬೆಳೆಯಲು ಕಾರಣ ಎಂದು ಹೇಳಬಹುದು.

ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಮತ್ತು ಎಸ್.ಎಂ.ಕೃಷ್ಣರವರು ಒಂದೇ ಸಮಯದಲ್ಲಿ ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪದವಿ ಓದುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನಲ್ಲಿ ಯೂನಿಯನ್ ಸೆಕ್ರೆಟರಿ ಚುನಾವಣೆಗೆ ಸ್ಪರ್ಧಿಸಿ ಸೋತರೂ 125 ಹೆಣ್ಣುಮಕ್ಕಳಲ್ಲಿ 105 ಜನರ ಓಟು ಪಡೆದು ಸಂಭ್ರಮಪಟ್ಟಿದ್ದರಂತೆ ಎಸ್.ಎಂ.ಕೃಷ್ಣರವರು.

ರಾಜಕೀಯ ಜೀವನದಲ್ಲೂ ಹಲವು ಸಾಧನೆಗಳಿಗೆ ನಾಂದಿ ಹಾಡಿದ ಇವರು ರಾಜ್ಯದ ಮೊದಲ ಉಪಮುಖ್ಯ ಮಂತ್ರಿ. ಅಮೇರಿಕಾದಲ್ಲಿ ಶಿಕ್ಷಣ ಪಡೆದು ಬಂದಿದ್ದರಿಂದ ಆಡಳಿತದಲ್ಲೂ ಒಂದಷ್ಟು ತಂತ್ರಜ್ಞಾನದ ಬಳಕೆಗೆ ಇಂಬು ನೀಡಿದರು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ವತಃ ಶಿಕ್ಷಕರನ್ನು ನೇಮಿಸಿಕೊಂಡು ಪ್ರತಿದಿನ ಕಂಪ್ಯೂಟರ್ ಕಲಿಯುತ್ತಿದ್ದರು. ರಾಜ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೂ ಇವರ ಕೊಡುಗೆ ಅಪಾರ.

ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ, ಬಿಸಿಯೂಟದ ಯೋಜನೆ, ಸ್ತ್ರೀಶಕ್ತಿ ಸಂಘಗಳು, ಯಶಸ್ವಿನಿ ಆರೋಗ್ಯ ವಿಮೆ ಇವೆಲ್ಲವೂ ಇವರ ಕೊಡುಗೆ.

2011 ರಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರು ನಗೆಪಾಟಲಿಗೆ ಗುರಿಯಾದ ಸಂದರ್ಭ ಬಂದೊದಗಿತ್ತು. ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವಾಗ ಭಾರತದ ಬದಲಿಗೆ ಪೋರ್ಚುಗೀಸ್ ನ ಭಾಷಣ ಓದಿ ಎಲ್ಲರ ಕೆಂಗಣ್ಣಿಗೆ ಗುರಿಯಾದರು. ಆಗ ಅವರಿಗೆ 80 ವರ್ಷ ವಯಸ್ಸಾಗಿತ್ತು. ಆಗ ಕಾಂಗ್ರೆಸ್ ಅವರಿಗೆ ರಾಜಕೀಯ ನಿವೃತ್ತಿಯನ್ನು ನೀಡಿ ಮನೆಗೆ ಕಳಿಸಿತು. 2018 ರಲ್ಲಿ ಆಶ್ಚರ್ಯಕರವಾಗಿ ಬಿಜೆಪಿಗೆ ಸೇರಿದರು.
ಎಸ್.ಎಂ.ಕೃಷ್ಣ ಅವರ ಆತ್ಮಚರಿತ್ರೆ ಸ್ಮೃತಿ ವಾಹಿನಿಯಲ್ಲಿ ಅವರು ತಮ್ಮ ಎಲ್ಲಾ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ.