ಉಡುಪಿ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ವಿಧಿವಶರಾಗಿರುವ ವಿಷಯ ತಿಳಿದು ತೀವ್ರ ಖೇದವಾಗಿದೆ . ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಳಮಟ್ಟದಿಂದ ಬಹಳ ಎತ್ತರದವರೆಗೆ ಬೆಳೆದು ಅನೇಕ ಮಹತ್ವದ ಸ್ಥಾನಮಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನನ್ಯತೆಯನ್ನು ಕೃಷ್ಣ ಅವರು ಸಂಪಾದಿಸಿದ್ದು ಉಲ್ಲೇಖನೀಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿಯೂ ಉತ್ತಮ ಕಾರ್ಯನಿರ್ವಹಿಸಿದ್ದು ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಬೆಳೆಸಿ ಸಾವಿರಾರು ಪ್ರತಿಭಾವಂತ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡಿ ಜೀವನದ ದಾರಿಯನ್ನು ತೆರೆದಿಡುವಲ್ಲಿ ಅವರ ದೂರದೃಷ್ಟಿಯ ಪಾತ್ರ ಸದಾ ಸ್ಮರಣೀಯ.
ಸಜ್ಜನಿಕೆ ,ಸಭ್ಯತೆ , ಸದಾಚಾರ ಮತ್ತು ಧರ್ಮ ಸಂಪನ್ನರೂ ಆಗಿದ್ದು ಶ್ರೀಮಠದ ಹಾಗೂ ನಮ್ಮ ಗುರುಗಳ ವಿಶೇಷ ಭಕ್ತರಾಗಿದ್ದರು . ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಪಂಚಮ ಶ್ರೀ ಕೃಷ್ಣ ಪರ್ಯಾಯದ ಸಂದರ್ಭದಲ್ಲಿ ರಾಷ್ಟ್ರ ರತ್ನ ಬಿರುದಿನೊಂದಿಗೆ ಸಂಮಾನಿಸಿದ್ದನ್ನು ಸ್ಮರಿಸುತ್ತೇವೆ .
ಗುರುಗಳ ಬಳಿಕ ನಮ್ಮ ಮೇಲೂ ಅದೇ ಅಭಿಮಾನ,ಭಕ್ತಿ ಪ್ರೀತಿಯನ್ನು ಹೊಂದಿದ್ದ ಕೃಷ್ಣ ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ; ಅವರ ಕುಟುಂಬಕ್ಕೂ ಅವರ ವಿಯೋಗದ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಶ್ರೀ ಕೃಷ್ಣಪರಮಾತ್ಮನಲ್ಲಿ ಪ್ರಾರ್ಥಿಸಿದ್ದಾರೆ.