ಪೆರ್ಡೂರು ರಾಜ್ಯಮಟ್ಟದ ಸಂಗೀತ ಸ್ಪರ್ಧೆ.

ಹೆಬ್ರಿ: ಗ್ರಾಮೀಣ ಪ್ರತಿಭೆಗಳು ಅನಾವರಣ ಗೊಳ್ಳಬೇಕಾದರೆ ವೇದಿಕೆ ಮತ್ತು ಅವಕಾಶ ಅತಿ ಅಗತ್ಯ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ತೆರೆ ಮರೆಯಲ್ಲಿರುವ ಗ್ರಾಮೀಣ ಪ್ರತಿಭೆ ಗಳಿಗೆ ನಿರಂತರವಾಗಿ ವೇದಿಕೆ ಕಲ್ಪಿಸುವುದರ ಜತೆಗೆ ಇಂದು ರಾಜ್ಯ ಮಟ್ಟದ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಎಂದು ಕಾಪು ತಹಸೀಲ್ದಾರರು ಹಾಗೂ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರತಿಭಾ ಆರ್. ಹೇಳಿದರು.

ಅವರು ಪೆರ್ಡೂರು ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನದಲ್ಲಿ ಪೆರ್ಡೂರು ಬಂಟರ ಸಂಘ (ರಿ ) ಪೆರ್ಡೂರು, ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ (ನಿ), ಪೆರ್ಡೂರು,ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಚಾಣಕ್ಯ ಇನ್ಸಿಟ್ಯೂಟ್ ಆಫ್ ಮ್ಯೂಸಿಕ್ ಹೆಬ್ರಿ ಇವರ ನೇತೃತ್ವದಲ್ಲಿ ನಡೆದ ವಾಯ್ಸ್ ಆಫ್ ಚಾಣಕ್ಯ -2024 ರಾಜ್ಯ ಮಟ್ಟದ ಟ್ರ‍್ಯಾಕ್ ಸಂಗೀತ ಸಮರದ ಸೆಮಿಫೈನಲ್ಸ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಪೆರ್ಡೂರು ಬಂಟರ ಸಂಘ ಹಾಗೂ ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ(ನಿ) ಇದರ ಅಧ್ಯಕ್ಷ ಕೆ. ಶಾಂತರಾಮ ಸೂಡ ಮಾತನಾಡಿ ಚಾಣಕ್ಯ ಸಂಸ್ಥೆ ವಿವಿಧ ಕಲಾ ಪ್ರಕಾರಗಳ ತರಗತಿಯನ್ನು ನಡೆಸುವುದರ ಜತೆಗೆ ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಕಳೆದ 8 ವರ್ಷಗಳಿಂದ ಉಚಿತ ಚಿತ್ರಕಲೆಯನ್ನು ಹಾಗೂ ಚೆಸ್ ತರಗತಿಯನ್ನು ಹೇಳಿ ಕೊಡುವುದರ ಮೂಲಕ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಇತರರಿಗೆ ಮಾದರಿ ಎಂದರು.

ಎಸ್.ಕೆ. ಗೋಲ್ಡಸ್ಮಿತ್ ಇಂಡಸ್ಟ್ರೀಯಲ್ ಕೋ- ಅಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು ಮಾತನಾಡಿ ಸಂಗೀತ ಕೇವಲ ಸ್ಪರ್ಧೆಗೆ ಸೀಮಿತವಾಗಿರದೆ ಆ ಕ್ಷೇತ್ರದಲ್ಲಿ ಸಾಧನೆ ಮಾಡವಂತಿರಬೇಕು ಎಂದರು.

ಈ ಸಂದರ್ಭದಲ್ಲಿ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಹಿರಿಯಡ್ಕ ರೈತರ ಸಹಕಾರಿ ಸಂಘ ಇದರ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕುಂಬಾರರ ಗುಡಿ ಕೈಗಾರಿಕಾ ಸಂಘ, ಪೆರ್ಡೂರು ಇದರ ಅಧ್ಯಕ್ಷ ಸಂತೋಷ ಕುಲಾಲ್, ತೀರ್ಪುಗಾರರಾದ ಕ್ಯಾಂಪ್ಕೋ (ಲಿ) ನಿಂತಿಕಲ್ಲು ಶಾಖಾ ಪ್ರಬಂಭಕ ರಮೇಶ್ ಡಿ, ಚಾಂತಾರು, ಸಂಗೀತ ಗುರು ಸ್ಮಿತಾ ನಾಗರಾಜ್ ಭಟ್, ಶ್ರಾವ್ಯ ಬಾಸ್ರಿ ಮೊದಲಾದವರು ಉಪಸ್ಥಿತರಿದ್ದರು.

ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಪೆರ್ಡೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಕೆ. ಶೆಟ್ಟಿ ಕುತ್ಯಾರು ಬೀಡು, ದೀಪಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಮುದ್ರಾಡಿ ಪ್ರೌಢ ಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ವಂದಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಗಾಯಕರು ಭಾಗವಹಿಸಿದ್ದು ಫೈನಲ್ ಗೆ 12 ಜನ ಆಯ್ಕೆಯಾದರು.

ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪೆರ್ಡೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಕೆ. ಶೆಟ್ಟಿ ಕುತ್ಯಾರು ಬೀಡು ವಹಿಸಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಿದರು. ಭಾರತೀಯ ಮಾನವ ಹಕ್ಕುಗಳ ಮಂಡಳಿಯ ರಾಜ್ಯಾಧ್ಯಕ್ಷ ಪ್ರಸಾದ್ ರೈ, ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಟ್ರಸ್ಟಿ ಸಂತೆಕಟ್ಟೆ ರಾಮದಾಸ್ ನಾಯ್ಕ್ ಮಾತನಾಡಿದರು.

ಈ ಸಂದರ್ಭದಲ್ಲಿ ಪೆರ್ಡೂರು ದೇವಳದ ಮಾಜಿ ಆಡಳಿತ ಮುಕ್ತೇಸರ ಶಂಕರ್ ಶೆಟ್ಟಿ, ಹೆಬ್ರಿ ಜೇಸಿ ಅಧ್ಯಕ್ಷೆ ಸೋನಿ ಪಿ. ಶೆಟ್ಟಿ, ನಿರೂಪಕಿ ದೀಪಿಕಾ ಶೆಟ್ಟಿ, ನಿತ್ಯಾನಂದ ಭಟ್, ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.