ಕಾರ್ಕಳ: ಯುವತಿಯ ಅಪಹರಣ, ಅತ್ಯಾಚಾರ ಪ್ರಕರಣ; ಮೂವರಿಗೆ ಜಾಮೀನು.

ಕಾರ್ಕಳ: ಯುವತಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಆರೋಪಿಗಳಾಗಿರುವ ಮೂವರಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಸಂತ್ರಸ್ತೆಯನ್ನು ಅಪಹರಿಸಿದ ಬಳಿಕ ಆರೋಪಿಗಳು ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿದೆ.

ಪ್ರಕರಣದ ವಿವರ:
ಇನ್‌ಸ್ಟಾಗ್ರಾಮ್ ಸ್ನೇಹಿತನೊಬ್ಬ 21 ವರ್ಷದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಘಟನೆ ಆಗಸ್ಟ್ 24 ರಂದು ಉಡುಪಿ ಜಿಲ್ಲೆಯ ಕಾರ್ಕಳ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಅನ್ಯ ಧರ್ಮದವನಾಗಿದ್ದ ಆಗಿದ್ದರಿಂದ ಕೋಮು ತಿರುವು ಪಡೆದಿತ್ತು.

ಕಾರ್ಕಳ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರಕರಣ ತಿರುವು ಪಡೆದುಕೊಂಡಿತ್ತು. ಆದಾಗ್ಯೂ, ಪೊಲೀಸರು ಸಾಮೂಹಿಕ ಅತ್ಯಾಚಾರದ ಸಾಧ್ಯತೆಯನ್ನು ತಳ್ಳಿಹಾಕಿದರು ಮತ್ತು ವದಂತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.

ಆರೋಪಿಗಳನ್ನು ಕಾರ್ಕಳ ಪಟ್ಟಣದ ಅಲ್ತಾಫ್ (34), ಸವಿಯೋ ರಿಚರ್ಡ್ ಕ್ವಾಡ್ರೋಸ್ (35) ಮತ್ತು ಅಭಯ್ (23) ಎಂದು ಗುರುತಿಸಲಾಗಿದೆ.

ಸಂತ್ರಸ್ತೆ ಮತ್ತು ಆರೋಪಿಗಳು ಮೂರು ತಿಂಗಳ ಕಾಲ ಇನ್ಸ್ಟಾಗ್ರಾಮ್ ನಲ್ಲಿ ಸ್ನೇಹಿತರಾಗಿದ್ದರು. ಆರೋಪಿ ಮತ್ತು ಸಂತ್ರಸ್ತೆ ಒಂದೇ ಜಾಗಕ್ಕೆ ಸೇರಿದವರು. ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯ ಸ್ನೇಹಿತನಾಗಿದ್ದ ಆರೋಪಿ ಅಲ್ತಾಫ್ ಸಂತ್ರಸ್ತೆಗೆ ಕರೆ ಮಾಡಿ ಆಕೆಯ ಕೆಲಸದ ಸ್ಥಳದ ಸಮೀಪವಿರುವ ನಿರ್ದಿಷ್ಟ ಸ್ಥಳಕ್ಕೆ ಬರುವಂತೆ ಹೇಳಿದ್ದ. ಸಂತ್ರಸ್ತೆ ನಿರ್ದಿಷ್ಟ ಸ್ಥಳಕ್ಕೆ ತಲುಪಿದಾಗ, ಅಲ್ಲಿಂದ ಆಕೆಯನ್ನು ಅಪಹರಿಸಲಾಯಿತು.

ಕೆಲವು ನಿದ್ರಾಜನಕಗಳನ್ನು ಬೆರೆಸಿದ ಪಾನೀಯವನ್ನು ಸೇವಿಸುವಂತೆ ಒತ್ತಾಯಿಸಲಾಯಿತು ಮತ್ತು ಆರೋಪಿಯು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.

ಅಪರಾಧ ಎಸಗಿದ ಬಳಿಕ ಆರೋಪಿ ಸಂತ್ರಸ್ತೆಯನ್ನು ಆಕೆಯ ಮನೆಗೆ ಬಿಟ್ಟು ಹೋಗಿದ್ದಾನೆ. ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 135, 64, 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.