ಉಡುಪಿ: ಉಡುಪಿ ಅಷ್ಟಮಠಗಳಲ್ಲೊಂದಾದ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಶ್ರೀ ಕೃಷ್ಣಪೂಜಾ ಪರ್ಯಾಯದ ಮೊದಲ ಮುಹೂರ್ತ “ಬಾಳೆ ಮುಹೂರ್ತ’ ಡಿ. 6ರಂದು ಬೆಳಗ್ಗೆ 7 ಗಂಟೆಗೆ ಪೂರ್ಣ ಪ್ರಜ್ಞ ಕಾಲೇಜಿನ ಹಿಂಭಾಗದ ಶ್ರೀ ಶೀರೂರು ಮಠದ ತೋಟದಲ್ಲಿ ನಡೆಯಲಿದೆ ಎಂದು ಮಠದ ದಿವಾನ್ ಉದಯ ಕುಮಾರ್ ಸರಳತ್ತಾಯ ತಿಳಿಸಿದರು.
ಶೀರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀವೇದವರ್ಧನ ತೀರ್ಥರ ಪ್ರಥಮ ಶ್ರೀಕೃಷ್ಣ ಪೂಜಾ ಪರ್ಯಾಯ 2026ರ ಜ.18ರಿಂದ 2028 ಜ.17ರವರೆಗೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಒಂದು ವರ್ಷ ಮೊದಲೇ ಪ್ರಾರಂಭಗೊಳ್ಳುವ ಪೂರ್ವಸಿದ್ಧತೆಯಲ್ಲಿ ಬಾಳೆ ಮುಹೂರ್ತ ಮೊದಲನೇಯಾದಾಗಿದೆ ಎಂದರು.
ಬಾಳೆ ಮುಹೂರ್ತಕ್ಕೂ ಮುನ್ನ ಬೆಳಿಗ್ಗೆ 6ಗಂಟೆಗೆ ಸಾಮೂಹಿಕ ಪ್ರಾರ್ಥನೆ ಹಾಗೂ ಇತರ ವಿಧಿವಿಧಾನಗಳು ನಡೆಯಲಿದ್ದು, ಬಳಿಕ ಶೀರೂರು ಮಠದಿಂದ ಮುಹೂರ್ತ ನಡೆಯುವ ತೋಟದವರೆಗೆ ಮೆರವಣಿಗೆಯಲ್ಲಿ ಬರಲಾಗುವುದು ಎಂದು ತಿಳಿಸಿದರು.
ಪರ್ಯಾಯಾವಧಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಅನ್ನಸಂತರ್ಪಣೆಗೆ ಬಾಳೆಎಲೆಗಾಗಿ ಬಾಳೆ ಮುಹೂರ್ತ ನಡೆಯಲಿದೆ. ಇಲ್ಲಿ 1000 ಬಾಳೆಗಿಡಗಳೊಂದಿಗೆ ಇತರ ಗಿಡಗಳನ್ನು ನೆಡಲಾಗುತ್ತದೆ. ಉಳಿದವುಗಳನ್ನು ಶೀರೂರು ಮೂಲ ಮಠದಲ್ಲಿ ಬೆಳೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಯಶಪಾಲ್ ಸುವರ್ಣ, ಮಠದ ಶ್ರೀಶ ಬಲ್ಲಾಳ್, ಶ್ರೀಪಾದ ಹೆಗ್ಡೆ, ವಾಸುದೇವ ಆಚಾರ್ಯ, ಮೋಹನ್ ಭಟ್, ಶ್ರೀಕಾಂತ್ ನಾಯಕ್ ಉಪಸ್ಥಿತರಿದ್ದರು.