ಉಡುಪಿ: ಉಡುಪಿ ನೇತ್ರ ತಜ್ಞರ ಸಂಘ, ಐ ಬೀಚ್ ಫಿಲ್ಮ್ ಫೆಸ್ಟಿವಲ್ ಹಾಗೂ ಮಾಹೆ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ನೇತ್ರ ತಜ್ಞರ ಸಂಘದ 43ನೇ ವಾರ್ಷಿಕ ಸಮ್ಮೇಳನ “KOSCON-2024” ಕೋಟೇಶ್ವರದ ಯುವ ಮೆರಿಡಿಯನ್ ಕನ್ ವೆನ್ಷನ್ ಸೆಂಟರ್ ನಲ್ಲಿ ಇದೇ ನ. 22ರಿಂದ 24ರವರೆಗೆ ನಡೆಯಲಿದೆ ಎಂದು ಪ್ರಸಾದ್ ನೇತ್ರಾಲಯ ಸಮೂಹ ನೇತ್ರ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಹಾಗೂ ಕರ್ನಾಟಕ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್ ಕೂಡ್ಲು ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 22ರಂದು ಸಂಜೆ 5.30ಕ್ಕೆ ಕೇಂದ್ರ ಸರಕಾರದ ಶಕ್ತಿ ಮತ್ತು ನೂತನ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಸೊ ನಾಯಕ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕೂಡ್ಲಿಗಿ ಶಾಸಕ ಎನ್. ಟಿ. ಶ್ರೀನಿವಾಸ್, ಗೋವಾ ಶಾಸಕ ಚಂದ್ರಕಾಂತ್ ಶೆಟ್ಟಿ, ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಈ ಸಮ್ಮೇಳನದಲ್ಲಿ ದೇಶದ ಖ್ಯಾತ ನೇತ್ರ ತಜ್ಞರಿಂದ ವೈಜ್ಞಾನಿಕ ದಿಕ್ಸೂಚಿ ಭಾಷಣಗಳು, ಸುಮಾರು 150ಕ್ಕೂ ಅಧಿಕ ತಾಂತ್ರಿಕ ಪ್ರಸ್ತುತಿಗಳು, ನೂರಕ್ಕೂ ಅಧಿಕ ಸಂಶೋಧನಾ ವಿಷಯ ಮಂಡನೆಗಳು, 75 ಕ್ಕೂ ಅಧಿಕ ಅಧಿವೇಶನ ಚರ್ಚೆಗಳು ನಡೆಯಲಿವೆ. ಅಲ್ಲದೆ, ನೇತ್ರ ವಿಜ್ಞಾನ ಸಂಸ್ಥೆಗಳಿಂದ ಮತ್ತು ಸ್ಟಾರ್ಟ್ ಅಪ್ ಸಂಸ್ಥೆಗಳಿಂದ ಪ್ರದರ್ಶನಗಳು ನಡೆಯಲಿವೆ.
7 ಅಂತರರಾಷ್ಟ್ರೀಯ, 30 ರಾಷ್ಟ್ರೀಯ ಹಾಗೂ 600 ರಾಜ್ಯಮಟ್ಟದ ತಜ್ಞ ಉಪನ್ಯಾಸಕರು ಭಾಗವಹಿಸಲಿದ್ದಾರೆ. ಅಖಿಲ ಭಾರತ ನೇತ್ರ ತಜ್ಞರ ಸಂಘಟನೆಯ ಹಾಗೂ ಮಾಹೆಯ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಸಹಿತ 2000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿದಿನ ಸಂಜೆ ಕರಾವಳಿ ಜಿಲ್ಲೆಯ ವಿವಿಧ ತಂಡಗಳಿಂದ ನಮ್ಮ ಪರಂಪರೆಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ನೇತ್ರ ವೈದ್ಯರಿಗಾಗಿ ಅಪ್ಥಲ್ಮಿಕ್ ಪ್ರಿಮಿಯರ್ ಲೀಗ್ ಎನ್ನುವ ವೈಜ್ಞಾನಿಕ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಂಘಟನಾ ಅಧ್ಯಕ್ಷ ಡಾ. ಯೋಗೀಶ್ ಕಾಮತ್, ಸಂಘಟನಾ ಕಾರ್ಯದರ್ಶಿಗಳಾದ ಡಾ. ಶಮಂತ್ ಶೆಟ್ಟಿ, ಡಾ. ಶೈಲಜಾ ಎಸ್. ಉಪಸ್ಥಿತರಿದ್ದರು.