ಹೆಬ್ರಿ: ಪೊಲೀಸ್ ಎನ್ಕೌಂಟರ್‌’ಗೆ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ

ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಪೀತಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೆಬ್ರಿ ಪರಿಸರದಲ್ಲಿ ಕಳೆದ ಕೆಲದಿನಗಳಿಂದ ನಕ್ಸಲ್ ಓಡಾಟ ವರದಿಯಾಗಿದ್ದು, ಎಎನ್ ಎಫ್ ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ತಡ ಒಂದು ಗಂಟೆ ಸುಮಾರಿಗೆ 5 ಮಂದಿ ನಕ್ಸಲರ ತಂಡ ಪೀತ ಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಎಎನ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ದಾಳಿ-ಪ್ರತಿದಾಳಿ ನಡೆದಿದ್ದು, ಪೊಲೀಸರ ಗುಂಡೇಟಿಗೆ ವಿಕ್ರಂ ಗೌಡ ಬಲಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ . ಉಳಿದ ನಾಲ್ವರು ಕಾಡಿನ ಹಾದಿಯಲ್ಲಿ ಪರಾರಿಯಾಗಿದ್ದಾರೆ. ಎಎನ್ ಎಫ್ ಕೂಂಬಿಂಗ್ ಮುಂದುವರಿಸಿದ್ದು, ಇನ್ನುಳಿದವರಿಗಾಗಿ ಶೋಧ ನಡೆಸುತ್ತಿದೆಎಂದು ಎ‌ಎನ್‌ಎಫ್ ಮೂಲಗಳು ತಿಳಿಸಿವೆ.

ಕಬ್ಬಿನಾಲೆ ಅರಣ್ಯದಲ್ಲಿ ನಡೆದ ಎನ್​ಕೌಂಟರ್​ನೊಂದಿಗೆ ಉಡುಪಿ ಭಾಗದಲ್ಲಿ 13 ವರ್ಷಗಳ ನಂತರ ಗುಂಡಿನ ಮೊರತೆ ಕೇಳಿದಂತಾಗಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್​ಕೌಂಟರ್​​ನಲ್ಲಿ ವಿಕ್ರಂ ಗೌಡ ಹತನಾದರೆ, ಉಳಿದ ನಕ್ಸಲರು ಪರಾರಿಯಾಗಿದ್ದಾರೆ.