ಕುಂದಾಪುರ: ಮೂಡ್ಲಕಟ್ಟೆ ಪದವಿ ಕಾಲೇಜಿನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ ನಾವೊಂನ್ಮೇಶ್ ಉದ್ಘಾಟನೆ

ಕುಂದಾಪುರ: ಆಧುನಿಕ ಜಗತ್ತಿನಲ್ಲಿ ಯಶಸ್ಸಿನ ಮೆಟ್ಟಿಲೇರಲು ಶೈಕ್ಷಣಿಕ ಪ್ರಗತಿಯ ಜೊತೆಗೆ ನಾಲ್ಕು ಬಹುಮುಖ್ಯ ವಿಷಯಗಳಾದ ನಾಯಕತ್ವ ಗುಣ, ಸೃಜನಶೀಲತೆ ಮತ್ತು ನಾವಿನ್ಯತೆ, ರಿಸ್ಕ್ ನಿರ್ವಹಣೆ, ಸೋಲನ್ನು ಸ್ವೀಕರಿಸುವಿಕೆ ಇವನ್ನು ನಿಭಾಯಿಸುವ ಕಲೆ ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ. ನಾವೊಂನ್ಮೇಶ್ ಅಂತಹ ಬಹುದೊಡ್ಡ ಕಾರ್ಯಕ್ರಮ ಆಯೋಜಿಸುವಿಕೆ ಮತ್ತು ನಿರ್ವಹಿಸುವುವಿಕೆ ನಿಮಗೆ ಅಂತಹ ಗುಣಗಳನ್ನು ಪಡೆಯಲು ಸಹಕರಿಸುತ್ತದೆ ಎಂದು ನಾವೊಂನ್ಮೇಶ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೀವಿಯಸ್ ಸೊಲ್ಯೂಷನ್ ಉಡುಪಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸುಯೋಗ್ ಶೆಟ್ಟಿ ಹೇಳಿದರು.

ಇನ್ನೊರ್ವ ಅತಿಥಿಗಳಾದ ಖ್ಯಾತ ಚಿತ್ರನಟಿ ಮತ್ತು ಭರತನಾಟ್ಯ ಕಲಾವಿದೆ ಶ್ರೀಮತಿ ವಿದೂಷಿ ಮಾನಸಿ ಸುಧೀರ್ ಮಾತನಾಡಿ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವು ಮಾಹಿತಿ ಸಂಗ್ರಹಿಸುವ ತಾಣವಾಗಬಾರದು. ಕಲೆ ಉತ್ತಮ ಶಿಕ್ಷಣದ ಒಂದು ಭಾಗ. ಕಲೆ ಕೌಶಲ್ಯವನ್ನು ಮೀರಿದ್ದು, ಕಲೆಯು ಉತ್ತಮ ಮನುಷ್ಯತ್ವದಿಂದ ದೊರಕುತ್ತದೆ. ಮೂಡ್ಲಕಟ್ಟೆ ಕಾಲೇಜು ಇಂತಹದೊಂದು ಅಬೂತಪೂರ್ವ ಇವೆಂಟ್ ರೂಪಿಸಿದೆ. ಇಂತಹ ವೇದಿಕೆಯಲ್ಲಿ ಭಾಗವಹಿಸುವಿಕೆ ನಿಮಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಡಬಲ್ಲದು. ವಿದ್ಯಾರ್ಥಿ ಜೀವನದಲ್ಲಿ ನೀವು ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸುಯೋಗ್ ಶೆಟ್ಟಿ ಮತ್ತು ಮಾನಸಿ ಸುಧೀರ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ ಅವರು ಕಾಲೇಜು ಹಾಗೂ ಫೆಸ್ಟ್ ನ ಕುರಿತು ಪ್ರಸ್ತಾವಿಕ ಮಾತನಾಡಿದರು.

ಕಾಲೇಜಿನ ಪ್ರಿನ್ಸಿಪಾಲ್ ಡಾ. ಪ್ರತಿಭಾ ಎಂ ಪಟೇಲ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾಗವಹಿಸುತ್ತಿರುವ ವಿವಿಧ ಕಾಲೇಜಿನ ಎಲ್ಲಾ ಸ್ಪರ್ಧಿಗಳಿಗೆ ಶುಭ ಹಾರೈಸಿದರು. ಉಪ ಪ್ರಂಶುಪಾಲರಾದ ಶ್ರೀ ಜಯಶೀಲ್ ಕುಮಾರ್, ಕಾಮರ್ಸ್ ವಿಭಾಗದ ಮುಖ್ಯಸ್ಥರು ಮತ್ತು ಕಾರ್ಯಕ್ರಮದ ಸಂಘಟಕಿ ಶ್ರೀಮತಿ ಅರ್ಚನಾ ಗದ್ದೆ, ಕಾರ್ಯಕ್ರಮದ ವಿದ್ಯಾರ್ಥಿ ಸಂಘಟಕರಾದ ಅಂತಿಮ ಬಿಸಿಎ ವಿದ್ಯಾರ್ಥಿ ಸಿಂಚನ್, ನಿತಿನ್ ಮತ್ತು ಅಂತಿಮ ಬಿಕಾಂ ವಿದ್ಯಾರ್ಥಿ ಕುಮಾರಿ ಹನ ಶೇಖ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ರಷಿತಾ ಸ್ವಾಗತಿಸಿದರು, ಸಿಂಚನ ಮತ್ತು ಸಂತೃಪ್ತಿ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ನಾನಾ ಜಿಲ್ಲೆಗಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.