ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಬ್ರಹ್ಮಾವರ ಠಾಣೆ ಎಸ್ ಐ ಸೇರಿದಂತೆ ಇಬ್ಬರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಕೇರಳದ ಕೊಲ್ಲಂ ಮೂಲದ ಆರೋಪಿ ಬಿಜು ಮೋನು(45)ನನ್ನು ಪೊಲೀಸರು ಬ್ರಹ್ಮಾವರ ಠಾಣೆಗೆ ಕರೆದುಕೊಂಡು ಬಂದು, ಆತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಚೇರ್ಕಾಡಿ ಗ್ರಾಮದ ಮಹಿಳೆಗೆ ಕಿರುಕುಳ ನೀಡಿದ ಆರೋಪ ಬಿಜು ಮೋನು ಮೇಲಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸದ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಧು ಬಿ.ಇ. ಮತ್ತು ಪ್ರಭಾರ ಠಾಣಾಧಿಕಾರಿಯಾಗಿರುವ ಹೆಡ್ಕಾಸ್ಟೇಬಲ್ ಸುಜಾತ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
ಲಾಕಪ್ಡೆತ್ ಪ್ರಕರಣದ ತನಿಖೆಗಾಗಿ ಬೆಂಗಳೂರಿನ ಸಿಐಡಿ ಪೊಲೀಸರ ತಂಡ ನಿನ್ನೆಯೇ ಬ್ರಹ್ಮಾವರಕ್ಕೆ ಆಗಮಿಸಿದ್ದು ತನಿಖೆ ಚುರುಕುಗೊಳಿಸಿದೆ.