ಧರ್ಮಸ್ಥಳ: ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದಲ್ಲಿ ಜರುಗುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಈ ವರ್ಷ ನ.26 ರಿಂದ ಡಿ.1 ರವರೆಗೆ ಅದ್ದೂರಿಯಾಗಿ ನಡೆಯಲಿದೆ. ನ.26ರಂದು ಹೊಸಕಟ್ಟೆ ಉತ್ಸವ, 27ರಂದು ಕೆರೆಕಟ್ಟೆ ಉತ್ಸವ, 28ರಂದು ಲಲಿತೋದ್ಯಾನ ಉತ್ಸವ, 29ರಂದು ಕಂಚಿಮಾರುಕಟ್ಟೆ ಉತ್ಸವ, 30ರಂದು ಗೌರಿಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ), ಡಿ.1ರಂದು ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣಪೂಜೆ ನಡೆಯಲಿದೆ.
ನ.26ರಂದು ಮಧ್ಯಾಹ್ನ 3 ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ 25,000ಕ್ಕೂ ಹೆಚ್ಚು ಭಕ್ತರು ಮತ್ತು ಅಭಿಮಾನಿಗಳು ಪಾದಯಾತ್ರೆಯಲ್ಲಿ ಪ್ರಾರ್ಥನೆ, ಭಜನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಆಗಮಿಸಲಿದ್ದಾರೆ.
ಈ ಪಾದಯಾತ್ರೆಯು ಶಾಸಕ ಹರೀಶ್ ಪೂಂಜ ಮತ್ತು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಅವರ ನೇತೃತ್ವದಲ್ಲಿ ನಡೆಯಲಿದೆ.
ರಾಜ್ಯಮಟ್ಟದ ವಸ್ತು ಪ್ರದರ್ಶನ:
ನ.26 ರಿಂದ 30ರವರೆಗೆ ಧರ್ಮಸ್ಥಳ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಸ್ತು ಪ್ರದರ್ಶನದಲ್ಲಿ ಕೃಷಿ, ಆರೋಗ್ಯ, ವಾಣಿಜ್ಯ, ಶಿಕ್ಷಣ, ಮತ್ತು ಗ್ರಾಮೀಣ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ 300ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗುವುದು.
ಅಮೃತವರ್ಷಿಣಿ ಸಭಾಭವನದಲ್ಲಿ ನ.29 ರಂದು ಸಂಜೆ 4 ಗಂಟೆಗೆ ಸರ್ವಧರ್ಮ ಸಮ್ಮೇಳನ ಹಾಗೂ ನ.30 ರಂದು ಸಂಜೆ 4 ಗಂಟೆಗೆ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ.