ಲೋಕ ಅದಾಲತ್ ಮೂಲಕ ಉಚಿತ ನ್ಯಾಯ: ಕಾವೇರಿ

ಉಡುಪಿ: ನ್ಯಾಯದಿಂದ ವಂಚಿತರಾದ, ಆರ್ಥಿಕವಾಗಿ ಹಿಂದುಳಿದವರಿಗೆ ಲೋಕ ಅದಾಲತ್ ಮೂಲಕ ಉಚಿತವಾಗಿ ನ್ಯಾಯ ಒದಗಿಸಿಕೊಡುವ ವ್ಯವಸ್ಥೆ ಇದ್ದು, ಈ ಬಗ್ಗೆ ಅರಿವು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ತಿಳಿಸಿದ್ದಾರೆ.

ಅವರು ಬುಧವಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ವಕೀಲರ ಸಂಘ (ರಿ) ಉಡುಪಿ ಮತ್ತು ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿಯ ಶ್ಯಾಮಿಲಿ ಇನ್‍ನ ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ನಡೆದ ಜನತಾ ಅದಾಲತ್, ಮಧ್ಯಸ್ಥಿಕೆ ಮತ್ತು ಸಮಾಲೋಚನಾ ವಿಷಯದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೋಕ ಅದಾಲತ್‍ನಲ್ಲಿ ಯಾವುದೇ ಶುಲ್ಕ ಪಾವತಿಸದೆ ಸಾರ್ವಜನಿಕರು ಮುಕ್ತವಾಗಿ ನ್ಯಾಯ ಪಡೆಯಬಹುದಾಗಿದೆ. ಆರ್ಥಿಕವಾಗಿ ಸಮೃದ್ಧಿ ಹೊಂದಿರುವವರು ದುರ್ಬಲರನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.  ಕಾನೂನಿನ ಅರಿವು ಇಲ್ಲದೇ ಸಾರ್ವಜನಿಕರು ಅನೇಕ ಬಾರಿ ಸುಲಭವಾಗಿ ಮೋಸ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯ ಒದಗಿಸಿ ಕೊಡುವಲ್ಲಿ ನೆರವಾಗುತ್ತದೆ. ಲೋಕ ಅದಾಲತ್‍ನಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಪ್ಯಾನಲ್ ಅಡ್ವೊಕೇಟ್ ಮೂಲಕ ಪ್ರಕರಣ ದಾಖಲಿಸಿ, ನ್ಯಾಯ ಒದಗಿಸಿಕೊಡಲಾಗುತ್ತದೆ ಎಂದರು.

ಸಹಾಯಕ ವ್ಯವಸ್ಥಾಪಕ ರವಿ ಕುಮಾರ್ ನಿರೂಪಿಸಿ ಸ್ವಾಗತಿಸಿದರು, ಉಡುಪಿ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಕಚೇರಿಯ ಉಪ ಪ್ರಾದೇಶಿಕ ವ್ಯವಸ್ಥಾಪಕ ಜಿ. ಗೋಪ ಕುಮಾರ್ ವಂದಿಸಿದರು.