ನವದೆಹಲಿಯ ಭಾರತೀಯ ಚಿಕಿತ್ಸಾ ಪದ್ಧತಿ ರಾಷ್ಟ್ರೀಯ ಆಯೋಗ (ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಂ ಆಫ್ ಮೆಡಿಸಿನ್) ನಡೆಸಿದ ಭಾರತೀಯ ಗುಣಮಟ್ಟ ಪರಿಷತ್ (ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ) ಮೌಲ್ಯಾಂಕನದಲ್ಲಿ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ರಾಷ್ಟ್ರ ಮಟ್ಟದಲ್ಲಿ `ಎ’ ಗ್ರೇಡ್ ಪಡೆದಿದೆ.
ಈ ಮೌಲ್ಯಾಂಕನ ಶೈಕ್ಷಣಿಕ ಗುಣಮಟ್ಟ, ಶಿಕ್ಷಕರ ಕ್ಷಮತೆ, ವಿದ್ಯಾರ್ಥಿಗಳ ಕಾರ್ಯಕ್ಷಮತೆ, ಸಂಶೋಧನೆ ಹಾಗೂ ಉತ್ಕೃಷ್ಟ ಗ್ರಂಥ ಪ್ರಕಟಣೆ ಮತ್ತು ಅಳವಡಿಸಿಕೊಂಡ ನೂತನ ಕಲಿಕಾ ವಿಧಾನಗಳು ಮೊದಲಾದ ಮಾನದಂಡಗಳ ಆಧಾರದ ಮೇಲೆ ನೀಡಲಾಗುತ್ತದೆ.
ಜೀವಿಗಳನ್ನು ಕಾಡುವ ಕಷ್ಟಸಾಧ್ಯ ಕಾಯಿಲೆಗಳಿಗೆ ಸಂಸ್ಥೆಯ ವಿನೂತನ ಔಷಧಿಗಳ ಆವಿಷ್ಕಾರ ಹಾಗೂ ಆ ಸಂಶೋಧನೆಗಳ ರಕ್ಷಣೆಗೆ ದೊರೆತ 20 ವರ್ಷಗಳ 17 ಅಮೇರಿಕಾದ ಪೇಟೆಂಟ್ ಗಳು ಸಂಸ್ಥೆಯ ರಾಷ್ಟ್ರ ಮಟ್ಟದ ಪ್ರಗತಿಗೆ ತನ್ನ ಕೊಡುಗೆ ನೀಡಿದೆ.
ದೇಶದಲ್ಲಿರುವ 500ಕ್ಕೂ ಹೆಚ್ಚಿನ ಆಯುರ್ವೇದ ಕಾಲೇಜುಗಳ ನಡುವೆ ಮೊದಲ ಹಂತದ ಮೌಲ್ಯಾಂಕನದಲ್ಲಿ ಉನ್ನತ ‘ಎ’ ಗ್ರೇಡ್ ಪಡೆದಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣದ ದ್ಯೋತಕವಾಗಿದ್ದು ಆಯುರ್ವೇದದ ಬೋಧನೆ, ಸಂಶೋಧನೆ ಹಾಗೂ ಚಿಕಿತ್ಸಾ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಸ್ಫೂರ್ತಿಯಾಗಿದೆ ಎಂದು ಕಳೆದ 80 ವರ್ಷಗಳಿಂದ ಆಯುರ್ವೇದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಅಧ್ಯಕ್ಷ ಡಾ. ಎಂ. ವಿಜಯಭಾನು ಶೆಟ್ಟಿ ತಿಳಿಸಿದ್ದಾರೆ.