ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಬುಧವಾರ (ನ6)ವಿಚಾರಣೆಗೆ ಹಾಜರಾಗಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಲೋಕಾಯುಕ್ತ ವಿಚಾರಣೆ ಬಳಿಕ, ಪ್ರಶ್ನೆಗಳ ಸುರಿಮಳೆಗೈದ ಮಾಧ್ಯಮ ಪ್ರತಿನಿಧಿಗಳಿಗೆ ಸಿಡಿಮಿಡಿಯಿಂದಲೇ ಉತ್ತರ ನೀಡಿದರು. ಹಲವು ಪ್ರಶ್ನೆಗಳನ್ನು ಮುಂದಿಟ್ಟಾಗ ಸಿಎಂ ರೇಗಾಡಿದರು.
‘ಎಲ್ಲವನ್ನೂ ಅವರು ರೆಕಾರ್ಡ್ ಮಾಡಿದ್ದಾರೆ. ಸುಳ್ಳು ಕೇಸ್ ಹಾಕಿದ್ದಾರೆ ವಿಚಾರಣೆ ಮಾಡಿದ್ದಾರೆ. ಇದರಲ್ಲಿ ನನಗೇಕೆ ಮುಜುಗರ. ನನ್ನನ್ನು ಮತ್ತೆ ವಿಚಾರಣೆಗೆ ಬರಲು ನನಗೆ ಹೇಳಿಲ್ಲ’ಎಂದರು.
ಲೋಕಾಯುಕ್ತ ಬೇಡ ಸಿಬಿಐಗೆ ನೀಡಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ‘ಸಿಬಿಐ ಹಾಗಿದ್ದರೆ ಯಾರ ಕೈಯಲ್ಲಿ ಇದೆ. ಬಿಜೆಪಿ ಅವರು ಯಾವ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರಾ?. ಲೋಕಾಯುಕ್ತ ಮಾಡಿರುವವರು ಯಾರು? ಲೋಕಾಯುಕ್ತ ಸ್ವತಂತ್ರವಾಗಿರುವ ಸಂಸ್ಥೆ, ಸ್ವತಂತ್ರವಾಗಿ ತನಿಖೆ ಮಾಡುತ್ತದೆ. ಬಿಜೆಪಿಯವರಿಗೆ ಕಾನೂನಿನ ಮೇಲೆ ಗೌರವವಿಲ್ಲ. ಬಿಜೆಪಿ ಲೋಕಾಯುಕ್ತದ ಮೇಲೆ ನಂಬಿಕೆ ಕಳೆದುಕೊಂಡಿರುವವರು ಸಿಬಿಐಗೆ ಕೊಟ್ಟಿದ್ದಾರಾ? ಬಿಜೆಪಿ ಅವರು ಕೇಳಿದ್ದಕ್ಕೆ ಉತ್ತರ ಕೊಡಬೇಕು ಅನ್ನೋದು ಏನಿದೆ. ಗವರ್ನರ್ ಯಾರಿಂದ ತನಿಖೆ ಮಾಡಬೇಕೆಂದು ಹೇಳಿದ್ದಾರೆ?ಲೋಕಾಯುಕ್ತದಿಂದಲೇ ತನಿಖೆ ಮಾಡಿ ಎಂದಿದ್ದಾರೆ’ ಎಂದು ಕಿಡಿ ಕಾರಿದರು.
ಸೈಟ್ ವಿಚಾರ ಎಲ್ಲಾವೂ ಕಾನೂನು ಪ್ರಕಾರವೇ ನಡೆದಿದೆ. ಬಿಜೆಪಿ- ಜೆಡಿಎಸ್ ನವರು ಸುಳ್ಳು ಆರೋಪ ಮಾಡಿದ್ದಾರೆ. ನಾವು ಸೈಟ್ ವಾಪಸ್ ನೀಡಿರೋದು ತಪ್ಪು ಮಾಡಿದ್ದೇವೆ ಎಂದಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದರು ಎಂದು ನನ್ನ ಹೆಂಡತಿ ತೀರ್ಮಾನ ತಗೊಂಡಿರುವುದು. ಈ ಕೇಸ್‌ಗಳನ್ನು ನಮ್ಮ ಬಳಿ ಇರುವ ಲಾಯರ್‌ಗಳು ಎದುರಿಸುತ್ತಾರೆ. ಸುಳ್ಳು ಆರೋಪಗಳು ಬಂದಾಗ ವಿಚಾರಣೆಗೆ ಹಾಜರಾಗಬೇಕಾಗಿದೆ. ನನ್ನ ಬಳಿ ಯಾವುದೇ ದಾಖಲೆ ಇಲ್ಲ.ಇದು ನನಗೆ ಸಂಬಂಧವೇ ಇಲ್ಲ. ಕೋರ್ಟ್‌ನಲ್ಲಿ ತೀರ್ಮಾನ ಆಗುವವರೆಗೆ ಅದು ಆರೋಪವಷ್ಟೇ. ಇದು ನನಗೆ ಕಪ್ಪು ಮಸಿ ಅಲ್ಲ’ ಎಂದರು.
ಸಿಎಂ ಸಿದ್ದರಾಮಯ್ಯ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ಲೋಕಾಯುಕ್ತ ಎಸ್ ಪಿ ಉದೇಶ್ ಅವರ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬೆಳಗ್ಗೆ 10.10 ರಿಂದ ಮಧ್ಯಾಹ್ನ 12.05 ರ ವರೆಗೆ ವಿಚಾರಣೆ ನಡೆಸಿದ್ದಾರೆ.
ಸೈಟ್ ಹಂಚಿಕೆ ಸಂಬಂಧ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಎ2 ಆಗಿರುವ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ, ಭೂ ಮಾಲೀಕ ದೇವರಾಜು ಅವರನ್ನು ಲೋಕಾಯುಕ್ತ ವಿಚಾರಣೆ ನಡೆಸಿತ್ತು. ಎ1 ಆಗಿರುವ ಸಿದ್ದರಾಮಯ್ಯ ಅವರನ್ನೂ ವಿಚಾರಣೆ ನಡೆಸಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.
ಸಾಮಾನ್ಯನಂತೆ ಬಂದ ಸಿಎಂ:
ವಿಚಾರಣೆಗೆ ಬರುವ ವೇಳೆ ಸಿಎಂ ಸಿದ್ದರಾಮಯ್ಯ ಅವರು ಸರಕಾರಿ ಕಾರು ಬಳಸದೆ ಖಾಸಗಿ ಕಾರಿನಲ್ಲಿ ಸಾಮಾನ್ಯನಂತೆ ಬಂದಿದ್ದರು. ಸರಕಾರಿ ಸಿಬಂದಿಯೂ ಅವರೊಂದಿಗೆ ಬಂದಿರಲಿಲ್ಲ. ಸ್ಥಳದಲ್ಲಿ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದರು. ವಿಚಾರಣೆಗೆ ಹಾಜರಾಗುವ ಮುನ್ನ ಸಿಎಂ ಕಾನೂನು ಸಲಹೆಗಾರ ಜತೆ ಸಭೆ ನಡಸಿದ್ದರು.
ಅವರ ಸಲಹೆ ಮೇರೆಗೆ ಸರಕಾರಿ ವಾಹನ ಬಳಸಲಿಲ್ಲ ಎಂದು ತಿಳಿದು ಬಂದಿದೆ. ಇದೆ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರು ಹಗರಣವೊಂದರ ಆರೋಪದಲ್ಲಿ ತನಿಖೆ ಎದುರಿಸಿದ್ದಾರೆ.