ಜಾರ್ಜಿಯಾ, ಉ.ಕೆರೋಲಿನಾದಲ್ಲಿ ಟ್ರಂಪ್‌ ಕಮಾಲ್‌, ಹ್ಯಾರಿಸ್‌ ಗೆ ತೀವ್ರ ಹಿನ್ನಡೆ; ಜೋ ಬೈಡನ್ ಕೇವಲ 11,779 ಮತಗಳ ಅಂತರದಲ್ಲಿ ಜಯ ಸಾಧಿಸಲು ಕಾರಣವಾಗಿದ್ದ ಜಾರ್ಜಿಯಾ

ವಾಷಿಂಗ್ಟನ್:‌ ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಆಯ್ಕೆಯಾಗುತ್ತಾರಾ ಅಥವಾ ಕಮಲಾ ಹ್ಯಾರಿಸ್‌ ಶ್ವೇತಭವನ ಪ್ರವೇಶಿಸುತ್ತಾರಾ ಎಂಬ ಕುತೂಹಲ ಇಡೀ ಜಗತ್ತಿನದ್ದಾಗಿದೆ. ಏತನ್ಮಧ್ಯೆ ಅಧ್ಯಕ್ಷಗಾದಿಗೆ ಏರಲು ನಿರ್ಣಾಯಕವಾಗಿರುವ ಏಳು ರಾಜ್ಯಗಳ ಫಲಿತಾಂಶದಲ್ಲಿ ಟ್ರಂಪ್‌ ಉತ್ತರ ಕೆರೋಲಿನಾ ಮತ್ತು ಜಾರ್ಜಿಯಾದಲ್ಲಿ ಗೆಲುವು ಸಾಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಜಾರ್ಜಿಯಾದ 16 ಎಲೆಕ್ಟ್ರೊರಲ್‌ ಕಾಲೇಜ್‌ ಮತಗಳು ಟ್ರಂಪ್‌ ಪಾಲಾಗಿರುವುದಾಗಿ ಸಿಎನ್‌ ಎನ್‌ ವರದಿ ಮಾಡಿದೆ. ಅಧ್ಯಕ್ಷೀಯ ಚುನಾವಣ ರಾಜಕೀಯದಲ್ಲಿ ಜಾರ್ಜಿಯಾ ನೂತನ ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ.

ಅದಕ್ಕೆ ಕಾರಣ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್‌ ಶ್ವೇತಭವನ ಪ್ರವೇಶಿಸಲು ಜಾರ್ಜಿಯಾ ಮತ ನಿರ್ಣಾಯಕ ಪಾತ್ರ ವಹಿಸಿತ್ತು. ಕಳೆದ ಅಧ್ಯಕ್ಷ ಚುನಾವಣೆಯಲ್ಲಿ ಜೋ ಬೈಡೆನ್‌ ಕೇವಲ 11,779 ಮತಗಳ ಅಂತರದಲ್ಲಿ ಜಯ ಸಾಧಿಸಲು ಕಾರಣವಾಗಿದ್ದ ಜಾರ್ಜಿಯಾ ಸುಮಾರು 30 ವರ್ಷಗಳ ನಂತರ ಮೊದಲ ಬಾರಿಗೆ ರಿಪಬ್ಲಿಕನ್‌ ಅಭ್ಯರ್ಥಿ ಟ್ರಂಪ್‌ ಪರ ಮತ ಚಲಾಯಿಸಿರುವುದು ಗಮನಾರ್ಹವಾಗಿದೆ.

ಜಾರ್ಜಿಯಾದಲ್ಲಿ ಕಮಲಾ ಹ್ಯಾರಿಸ್‌ ಗೆ ತೀವ್ರ ಹಿನ್ನಡೆಯಾದಂತಾಗಿದೆ. ಪ್ರಸ್ತುತ ಫಲಿತಾಂಶದ ಟ್ರೆಂಡ್ಸ್‌ ಪ್ರಕಾರ ಡೊನಾಲ್ಡ್‌ ಟ್ರಂಪ್‌ 247 ಮತಗಳು ಕಮಲಾ ಹ್ಯಾರಿಸ್‌ 210 ಮತಗಳನ್ನು ಪಡೆದಿರುವುದಾಗಿ ವರದಿ ವಿವರಿಸಿದೆ.

ಈ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಇನ್ನುಳಿದ ಎಲ್ಲಾ ಸ್ಥಾನಗಳಲ್ಲಿ ಗೆಲುವು ಸಾಧಿಸಿದಲ್ಲಿ ಮಾತ್ರ ಅಧ್ಯಕ್ಷಗಾದಿಗೆ ಅಗತ್ಯವಿರುವ ಮ್ಯಾಜಿಕ್‌ ಸಂಖ್ಯೆ 270 ಮತಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ವರದಿ ವಿಶ್ಲೇಷಿಸಿದೆ.