ಬೆಳ್ತಂಗಡಿ: ಜಲ ಪ್ರಳಯದಿಂದ ತತ್ತರಿಸಿದ ನಿರಾಶ್ರಿತ 56 ಮಂದಿಗೆ ಈ ಹೆಣ್ಣುಮಗಳು ತನ್ನ ಮನೆಯಲ್ಲಿ ಆಶ್ರಯ ನೀಡಿ ಸುದ್ದಿಯಾಗುತ್ತಿದ್ದಾರೆ. ಇವರ ಮಾನವೀಯತೆ, ಪ್ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಜಲಪ್ರಳಯದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ದಿಡುಪೆ, ಕೊಳಂಬೆ ಕುಕ್ಕಾವು ಹೀಗೆ ತಾಲೂಕಿನ ಹಲವು ಭಾಗಗಳು ನಲುಗಿ ಹೋಗಿದೆ. ಹಲವು ಮಂದಿ ಆಸ್ತಿ ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಇಂಥ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ವಿಶೇಷ ಎಂಬಂತೆ ಅಗರೀಮಾರ್ ಜಲಜಾಕ್ಷಿ ಎಂಬುವವರು ತನ್ನ ಮನೆಯಲ್ಲಿಯೇ ಸಂತ್ರಸ್ತ 56 ಮಂದಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಒಂದು ಹೊತ್ತು ಊಟ ನೀಡುದಕ್ಕೂ ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ಅಷ್ಟು ಮಂದಿಗೆ ಆಶ್ರಯ ನೀಡಿದ್ದು ನಿಜಕ್ಕೂ ಮಾನವೀಯತೆಯೇ ಸರಿ. ಅಲ್ಲದೇ ಇವರ ಈ ಸಾಧನೆ ಮೆಚ್ಚಿ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಡಿಸಿದ್ದಾರೆ.ಇಂತವರ ಸಂತತಿ ಸಾವಿರವಾಗಲಿ ಎನ್ನುವ ಮಾತು ಕೇಳಿಬರುತ್ತಿದೆ.