ಉಡುಪಿ, ಅ.23: ಮಹಿಳೆಯೊಬ್ಬರಿಗೆ ವಾಟ್ಸಾಪ್ ವಿಡಿಯೋ ಕಾಲ್‌ನಲ್ಲಿ ಅರೆಸ್ಟ್ ಮಾಡುವುದಾಗಿ ಬೆದರಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.25ರಂದು ಅಪರಿಚಿತ ವ್ಯಕ್ತಿಯೊಬ್ಬರು ಪ್ರಮೀಳಾ (39) ಎಂಬವರಿಗೆ ಕರೆ ಮಾಡಿ, ನಿಮ್ಮ ಹೆಸರಿಗೆ ಪಾರ್ಸೆಲ್ ಕಳುಹಿಸಿದ್ದು ಪಾರ್ಸೆಲ್ ನಲ್ಲಿ 8 ಕ್ರೆಡಿಟ್ ಕಾರ್ಡ್ ಮತ್ತು 700 ಗ್ರಾಂ ಡ್ರಗ್ಸ್ ಇರುವುದಾಗಿ ತಿಳಿಸಿದ್ದನು. ತಮ್ಮ ಮೇಲೆ ಎಫ್‌ಐಆರ್ ದಾಖಲಾಗಿರುವುದಾಗಿ ತಿಳಿಸಿದ್ದು, ನಂತರ ತಾನು ಬಾಂಬೆ ಸೈಬರ್ ಕ್ರೈಂ ಬ್ರಾಂಚ್ ಕಾಲ್ ಕನೆಕ್ಟ್ ಮಾಡಿರುವುದಾಗಿ ತಿಳಿಸಿದ್ದನು.
ಬಳಿಕ ಪೊಲೀಸ್ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ಪ್ರಮೀಳಾಗೆ ವಿಡಿಯೋ ಕಾಲ್‌ನಲ್ಲಿ ಚಾಟ್ ಮಾಡಿ ಆಧಾರ್ ಕಾರ್ಡ್ ಕೇಳಿ ಪಡೆದಿದ್ದನು. ನಂತರ ಪ್ರಮೀಳಾ ಅವರ ಹೆಸರು ವಿಳಾಸ ಹಾಗೂ ಆಧಾರ್ ನಂಬರ್ ಇರುವ ಅರೆಸ್ಟ್ ಆರ್ಡರ್ ಕಳುಹಿಸಿದ್ದು ನಂತರ ಅರೆಸ್ಟ್, ಅರೆಸ್ಟ್ ಎಂದು ಹೇಳಿ ಬೆದರಿಸಿದ್ದನು. ಇದರಿಂದ ಹೆದರಿದ ಪ್ರಮೀಳಾ ತನ್ನ ಬ್ಯಾಂಕ್ ಖಾತೆಯ ಮಾಹಿತಿ ನೀಡಿದ್ದರು.
ಹೀಗೆ ಪ್ರಮೀಳಾಗೆ ಮೊಬೈಲ್ ಕರೆ, ಸ್ಕೈಫ್ ಆಫ್ ಕನೆಕ್ಟ್, ವಾಟ್ಸಾಪ್ ವಿಡಿಯೋ ಮೂಲಕ ಅರೆಸ್ಟ್ ಎಂದು ಬೆದರಿಸಿ 11,87,463ರೂ. ಹಣವನ್ನು ಮೋಸದಿಂದ ಪಡೆದು ವಂಚಿಸಿರುವುದಾಗಿ ದೂರಲಾಗಿದೆ.