ಮಂಗಳೂರು:ಅ. 27 ರಂದು ಚೌರಾಸಿಯಾ ಮತ್ತು ಚಟರ್ಜಿ ಸಮಾಗಮ

ಮಂಗಳೂರು:ಸಂಗೀತ ಭಾರತೀ ಪ್ರತಿಷ್ಠಾನವು ಮಂಗಳೂರಿನ ಪುರಭವನದಲ್ಲಿ ಅ. 27ರಂದು ಭಾನುವಾರ ಸಂಜೆ 5.30 ರಿಂದ “ಸ್ವರಗಳ ಸಂಜೆ – ಶಾಸ್ತ್ರೀಯ ಸಂಗೀತದ ಸಂಜೆ’ ಎಂಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.

ದೇಶ ವಿದೇಶಗಳ ಪ್ರಖ್ಯಾತ ವೇದಿಕೆಗಳಲ್ಲಿ ಯಶಸ್ವಿ ಕಾರ್ಯಕ್ರಮ ನೀಡಿರುವ ದೇಶದ ಹೆಮ್ಮೆಯ ಕಲಾವಿದರಾದ ಪಂ|| ರಾಕೇಶ್ ಚೌರಾಸಿಯಾ ಮತ್ತು ನಾಡು ಕಂಡ ಶ್ರೇಷ್ಠ ಸಿತರ್ ವಾದಕ ಪಂ|| ಪೂರ್ಬಯಾನ್ ಚಟರ್ಜಿ ಅವರ ಸೀತಾರ್ ವಾದನ ಕೇಳುವ ಅವಕಾಶ ಮಂಗಳೂರಿಗೆ ದೊರೆತಿದೆ.

ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಬಾನ್ಸುರಿ ವಾದಕ ಪಂ|| ರಾಕೇಶ್ ಚೌರಾಸಿಯ ಅವರಿಂದ ಬಾನ್ಸುರಿ ವಾದನ ನಡೆಯಲಿದೆ. ಇವರಿಗೆ ಪ್ರಖ್ಯಾತ ತಬ್ಲಾ ಪಟು ಮುಂಬಯಿಯ ಓಜಸ್ ಅದಿಯಾ ಸಹಕಾರ ನೀಡಲಿದ್ದಾರೆ.ಇದಾದ ಬಳಿಕ ಹೆಸರಾಂತ ಸಿತಾರ್ ವಾದಕ ಉಂದಿನ ಪಂಡಿತ್ ಪೂರ್ಬಯಾನ್ ಚಟರ್ಜಿ ಅವರ ಸೀತಾರ್ ವಾದನ ನಡೆಯಲಿದೆ.

ಇವರಿಗೆ ತಬ್ಲಾದಲ್ಲಿ ಮುಂಬಯಿಯ ಪ್ರಖ್ಯಾತ ತಬ್ಲಾ ವಾದಕರಾದ ಸತ್ಯಜಿತ್ ತಲ್ವಾಲ್ಕಕರ್ ಸಾಥ್ ನೀಡಲಿದ್ದಾರೆ.ಈ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಕ್ಕೆ ಕೆನರಾ ಬ್ಯಾಂಕ್ ಮುಖ್ಯ ಪ್ರಯೋಜಕರಾಗಿದ್ದು, ಸಹಪ್ರಯೋಜಕರಾಗಿ ಐಡಿಯಲ್ ಐಸ್‌ಕ್ರೀಂ, ಎಂಆರ್‌ಪಿಎಲ್, ಎಕ್ಸ್ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಸಹಕಾರ ನೀಡಲಿದ್ದಾರೆ.

ಇದೊಂದು ಅಪರೂಪ ಹಾಗೂ ವಿಶೇಷ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ವಿಶ್ವದ ಶ್ರೇಷ್ಠ ಸಂಗೀತ ವೇದಿಕೆಯಲ್ಲಿ ಹಾಗೂ ಸಂಗೀತ ದಿಗ್ಗಜರೊಂದಿಗೆ ನುಡಿಸಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಿರಿಯ ಕಲಾವಿದರು ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶ ಇದ್ದು, ಸಂಗೀತಾಸಕ್ತರು, ಸಂಗೀತ ಶಿಕ್ಷಕರು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಸಂಗೀತ ಭಾರತಿಯ ಉಪಾಧ್ಯಕ್ಷ ಪ್ರೋ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.ರಾಕೇಶ್ ಚೌರಾಸಿಯಾ ರಾಕೇಶ್ ಚೌರಾಸಿಯಾ ಅವರು ದೇಶ ಕಂಡ ಸರ್ವ ಶ್ರೇಷ್ಠ ಬಾನ್ಸುರಿ ವಾದಕರಲ್ಲಿ ಓರ್ವರಾಗಿದ್ದಾರೆ. ಖ್ಯಾತ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾ ಅವರ ಸೋದರಳಿಯ.

2007 ರಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಭಾರತೀಯ ಸಂಗೀತ ಅಕಾಡೆಮಿ ಪ್ರಶಸ್ತಿ, 2008 ರಲ್ಲಿ ಆದಿತ್ಯ ಬಿರ್ಲಾ ಕಲಾಕಿರಣ ಪುರಸ್ಕಾರ ಮತ್ತು 2011 ರಲ್ಲಿ ಗುರು ಶಿಷ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ತಮ್ಮ ಸಹಯೋಗದ ಸಂಗೀತ ಆಲ್ಬಂ ಆಸ್ ವಿ ಸ್ಪೀಕ್‌ಗಾಗಿ ಎರಡು ಗ್ರ‍್ಯಾಮಿ ಪ್ರಶಸ್ತಿ ದೊರೆತಿದೆ.

ಪೂರ್ಬಯನ್ ಚಟರ್ಜಿ ಓರ್ವ ಸರ್ವಶ್ರೇಷ್ಠ ಭಾರತೀಯ ಸಿತಾರ್ ವಾದಕರಾಗಿರುವ ಪೂರ್ಬಯನ್ ಚಟರ್ಜಿ ಅವರು, ತಂದೆ ಪಾರ್ಥಪ್ರತಿಮ್ ಚಟರ್ಜಿಯವರಿಂದ ಸಿತಾರ್ ಕಲಿತರು. 2013 ರಲ್ಲಿ, ಚಟರ್ಜಿ ಅವರು ಕೋಲ್ಕತ್ತಾ ನಗರಕ್ಕಾಗಿ ತೋಮೇಕ್ ಚಾಯ್ ಬೋಲೆ ಬಂಚಿ (ನಾನು ನಿನಗಾಗಿ ಹಂಬಲಿಸುತ್ತಿರುವಂತೆ ಬದುಕುತ್ತೇನೆ) ಎಂಬ ಗೀತೆಯನ್ನು ರಚಿಸಿದರು, ಜೊತೆಗೆ ಶ್ರೀಜಾತೋ ಅವರ ಹಿಂದಿ ಮತ್ತು ಬೆಂಗಾಲಿ ಸಾಹಿತ್ಯದೊಂದಿಗೆ ಮತ್ತು ಬಿಕ್ರಮ್ ಘೋಷ್ ಅವರ ಇಂಗ್ಲಿಷ್ ಸಾಹಿತ್ಯದೊಂದಿಗೆ ರಚಿಸಿದ್ದರು. ಈ ಮೂಲಕ ಅಧಿಕೃತ ಗೀತೆಯನ್ನು ಹೊಂದಿರುವ ನಗರ ಖ್ಯಾತಿಯನ್ನು ಪಡೆದಿದೆ.

ಚಟರ್ಜಿಯವರು 15ನೇ ವಯಸ್ಸಿನಲ್ಲಿ ದೇಶದ ಅತ್ಯುತ್ತಮ ವಾದ್ಯಗಾರರಾಗಿ ಭಾರತದ ರಾಷ್ಟ್ರಪತಿ ಅವರಿಂದ ಪ್ರಶಸ್ತಿಯನ್ನು ಪಡೆದರು. ಆದಿತ್ಯ ವಿಕ್ರಮ್ ಬಿರ್ಲಾ ಪ್ರಶಸ್ತಿ, 1995 ರಲ್ಲಿ ರೋಟರಿ ಇಂಟರ್ ನ್ಯಾಷನಲ್‌ನಿಂದ ರಸೋಯಿ ಪ್ರಶಸ್ತಿ ದೊರೆತಿದೆ.