ಕಾರ್ಕಳ: ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಪತ್ನಿ ವಿಷವುಣಿಸಿ ಕೊಂದ ಘಟನೆ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದೆ. ಈ ಸಂಬಂಧ ಆರೋಪಿ ಪತ್ನಿ ಮತ್ತು ಆಕೆಯ ಪ್ರಿಯಕರ ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದವರನ್ನು ಅಜೆಕಾರು ನಿವಾಸಿ ಸಂಜೀವ ಪೂಜಾರಿ ಎಂಬವ ಮಗ ಬಾಲಕೃಷ್ಣ ಪೂಜಾರಿ (44) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮೃತರ ಪತ್ನಿ ಪ್ರತಿಮಾ (36) ಮತ್ತು ಆಕೆಯ ಪ್ರಿಯಕರ ಕಾರ್ಕಳದ ದಿಲೀಪ್ ಹೆಗ್ಡೆ(28) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ರೀಲ್ಸ್ ಮೂಲಕ ಪ್ರಸಿದ್ಧಿ:
ಬಾಲಕೃಷ್ಣ ಕಾರ್ಕಳದ ನಿಟ್ಟೆ ಕಾಲೇಜಿನ ಕ್ಯಾಂಟೀನಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರತಿಮಾ ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ಹೊಂದಿದ್ದಳು. ಮೇಕಪ್ ಆರ್ಟಿಸ್ಟ್ ಆಗಿದ್ದ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮೂಲಕ ಪ್ರಸಿದ್ಧಿ ಪಡೆದಿದ್ದಳು. ಇದರಿಂದ ಆಕೆಗೆ ಕಾರ್ಕಳದ ಹೋಟೆಲೊಂದರ ಮಾಲಕನ ಪುತ್ರ ದಿಲೀಪ್ ಹೆಗ್ಡೆಯ ಪರಿಚಯವಾಗಿತ್ತು.

ಇಬ್ಬರ ಸ್ನೇಹಕ್ಕೆ ಪತಿ ಅಡ್ಡಿ:
ಇವರ ಮಧ್ಯೆ ಸ್ನೇಹ ಬೆಳೆದು, ಅನೈತಿಕ ಸಂಬಂಧಕ್ಕೆ ಕಾರಣವಾಯಿತು. ಇವರಿಬ್ಬರ ಸ್ನೇಹಕ್ಕೆ ಪತಿ ಬಾಲಕೃಷ್ಣ ಅಡ್ಡಿ ಬರಬಹುದೆಂದು ಅವರನ್ನು ಕೊಲೆ ಮಾಡಲು ಇವರು ಸಂಚು ರೂಪಿಸಿದರು. ಅವರ ಸಂಚಿನಂತೆ ದಿಲೀಪ್ ಹೆಗ್ಡೆ, ಪ್ರತಿಮಾಳಿಗೆ ವಿಷ ಪದಾರ್ಥವನ್ನು ತಂದು ಪ್ರತಿದಿನ ಕೊಡುತ್ತಿದ್ದು, ಅದನ್ನು ಆಕೆ ಬಾಲಕೃಷ್ಣರಿಗೆ ಊಟದಲ್ಲಿ ಸೇರಿಸಿ ಕೊಡುತ್ತಿದ್ದಳು. ಆಹಾರದಲ್ಲಿ ಸ್ವಲ್ಪ ಸ್ವಲ್ಪವೇ ವಿಷವುಣಿಸಿ, ಅವರ ಆರೋಗ್ಯ ಕೆಡುವಂತೆ ನೋಡಿಕೊಂಡಳು. ಹೀಗೆ ಬಾಲಕೃಷ್ಣ ಕ್ರಮೇಣ ಅನಾರೋಗ್ಯಕ್ಕೆ ತುತ್ತಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಕಾರ್ಕಳ, ಮಣಿಪಾಲ, ಮಂಗಳೂರು ವೆನ್ಲಾಕ್ ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಗುಣಮುಖರಾಗದೇ ಇರುವುದರಿಂದ ಅವರನ್ನು ಅ.19ರಂದು ರಾತ್ರಿ ಮನೆಗೆ ಕರೆದುಕೊಂಡು ಬರಲಾಗಿತ್ತು.
ಸಂಶಯಾಸ್ಪದ ಮೃತ್ಯು:
ಅ.20ರಂದು ನಸುಕಿನ ವೇಳೆ ಸುಮಾರು 3:30 ಗಂಟೆಗೆ ಮನೆಯಲ್ಲಿ ಬೊಬ್ಬೆ ಕೇಳಿದ ತಕ್ಷಣ ತಂದೆ ಸಂಜೀವ ಪೂಜಾರಿ, ಹೋಗಿ ನೋಡಿದಾಗ ಬಾಲಕೃಷ್ಣ ಮಾತನಾಡದೇ ಇರುವುದು ಕಂಡುಬಂತು. ಬೆಳಿಗ್ಗೆ 8 ಗಂಟೆಗೆ ಅಜೆಕಾರಿನ ಸರಕಾರಿ ಆಸ್ಪತ್ರೆಯ ವೈದ್ಯರನ್ನು ಕರೆಸಿ ಪರೀಕ್ಷಿಸಿದಾಗ ಬಾಲಕೃಷ್ಣ ಮೃತಪಟ್ಟಿರುವುದು ದೃಢಪಟ್ಟಿತು ಎನ್ನಲಾಗಿದೆ. ಬಾಲಕೃಷ್ಣ ಒಮ್ಮೇಲೆ ಅನಾರೋಗ್ಯದಿಂದ ಮೃತಪಟ್ಟಿರುವ ಕಾರಣ ಮೃತರ ಮರಣದಲ್ಲಿ ನಿಖರವಾದ ಕಾರಣದ ಬಗ್ಗೆ ಸಂಶಯ ಇರುವುದಾಗಿ ತಂದೆ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.












