ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ ಕಿಚ್ಚ:ವೀಕ್ಷಕರಿಗೆ ಬಿಗ್ ಶಾಕ್.

ಬೆಂಗಳೂರು: ಬಿಗ್ ಬಾಸ್ ಕನ್ನಡ 11ನೇ ಸೀಸನ್ ಸಾಗುತ್ತಿದೆ. ಕಿಚ್ಚ ಸುದೀಪ್ ನಡೆಸಿಕೊಡುವುದರಿಂದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರುನಾಡಿನಲ್ಲಿ ದೊಡ್ಡ ವೀಕ್ಷಕರಿದ್ದಾರೆ. ಬಿಗ್ ಬಾಸ್ ಸೀಸನ್-11 ಈ ಬಾರಿ ಆರಂಭವಾಗುವ ಮುನ್ನವೇ ನಿರೂಪಕರ ವಿಚಾರದಲ್ಲಿ ಭಾರೀ ಸದ್ದು ಮಾಡಿತ್ತು.

ಮುಖ್ಯವಾಗಿ ಈ ಬಾರಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದು ಅನುಮಾನ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಆಯೋಜಕರು ಹಾಗೂ ಕಲರ್ಸ್ ಕನ್ನಡದ ಮಾತಿಗೆ ಒಪ್ಪಿದ ಕಿಚ್ಚ ಬಿಗ್ ಬಾಸ್ ನಡೆಸಿಕೊಡಲು ಒಪ್ಪಿದ್ದು, ನಿರೂಪಣೆ ಮಾಡುತ್ತಿದ್ದಾರೆ.

ಆದರೆ ಇದೀಗ ಬಿಗ್ ಬಾಸ್ ಸೀಸನ್ -11 ಶುರುವಾದ ಎರಡು ವಾರದಲ್ಲೇ ಕಿಚ್ಚ ಸುದೀಪ್ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ.

ಇದು‌ ನಿರೂಪಕನಾಗಿ ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಎಂದು ಕಿಚ್ಚ ಹೇಳಿದ್ದಾರೆ. ಈ ಬಗ್ಗೆ ‘ಎಕ್ಸ್’ ನಲ್ಲಿ ಅವರು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಬಿಗ್ ಬಾಸ್ ಟಿವಿ ರೇಟಿಂಗ್ ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಇದನ್ನು ಕಿಚ್ಚ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಇದೀಗ ಇದೇ ಫೋಟೋವನ್ನು ಹಂಚಿಕೊಂಡು,“ಬಿಗ್ ಬಾಸ್ ಗೆ ಅಪಾರವಾದ ಪ್ರೀತಿ ತೋರಿಸಿರುವುದಕ್ಕೆ ನಿಮ್ಮೆಗೆಲ್ಲರಿಗೂ ಧನ್ಯವಾದಗಳು. ಕಾರ್ಯಕ್ರಮಕ್ಕೆ ಸಿಕ್ಕಿರುವ ಟಿಆರ್​ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ.10+1 ವರ್ಷ ಜತೆಯಾಗಿ ಪ್ರಯಾಣಿಸಿದ್ದೇನೆ. ಈಗ ನಾನು ಏನು ಮಾಡಬೇಕು ಅಂದುಕೊಂಡಿದ್ದೇನೋ ಅದರೊಂದಿಗೆ ಮುಂದುವರೆಯುವ ಸಮಯ ಬಂದಿದೆ. ಇದು ಬಿಗ್ ಬಾಸ್ ನಿರೂಪಕನಾಗಿ ನನ್ನ ಕೊನೆ ಸೀಸನ್ ಆಗಿದೆ. ನನ್ನ ನಿರ್ಧಾರವನ್ನು ಕಲರ್ಸ್ ಹಾಗೂ ಬಿಗ್ ಬಾಸ್ ನ್ನು ಅನುಸರಿಸಿದ ಎಲ್ಲರಿಗೂ ಗೌರವಿಸುತ್ತದೆ ಎನ್ನುವುದನ್ನು ‌ನಾನು ನಂಬುತ್ತೇನೆ” ಎಂದು ಕಿಚ್ಚ ಹೇಳಿದ್ದಾರೆ.

ಈ ಸೀಸನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ನನ್ನ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ ಎಂದು ಕಿಚ್ಚ ಹೇಳಿದ್ದಾರೆ.
ಅಂದ ಹಾಗೆ ಕಿಚ್ಚ ಸುದೀಪ್ ಈ ಬಾರಿ ಬಿಗ್ ಬಾಸ್ ನಡೆಸಿಕೊಡಲ್ಲ ಎಂದು ಮೊದಲು ಹೇಳಿದ್ದರು. ಆ ಬಳಿಕ ಅವರ ಮನವೊಲಿಸಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಸುದೀಪ್ ಹೇಳಿದ್ದರು.