ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ವಲಸಿಗರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಯಶ್ಪಾಲ್ ಸುವರ್ಣ ಆಗ್ರಹ

ಉಡುಪಿ: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದು, ದೇಶದ ಭದ್ರತೆಯ ದೃಷ್ಟಿಯಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರದ ಗೃಹ ಇಲಾಖೆಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ ಮಾಡಿದ್ದಾರೆ.

ಏಷ್ಯಾದ ಅತೀ ದೊಡ್ಡ ಮೀನುಗಾರಿಕಾ ಬಂದರಾಗಿ ಗುರುತಿಸಿಕೊಂಡಿರುವ ಮಲ್ಪೆ ಬಂದರಿನಲ್ಲಿ ಕೆಲಸಕ್ಕಾಗಿ ಬಂದು ಅಕ್ರಮವಾಗಿ ಬಾಂಗ್ಲಾ ಪ್ರಜೆಗಳು ನೆಲೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪೊಲೀಸರು ತಕ್ಷಣ ಅಕ್ರಮ ವಲಸಿಗರಿಗೆ ಸಹಕರಿಸಿದವರನ್ನು ತಕ್ಷಣ ಬಂಧಿಸಿ ವಿಚಾರಣೆ ನಡೆಸಬೇಕಿದೆ.

ಶಿಕ್ಷಣ, ಮೀನುಗಾರಿಕೆ, ಆರೋಗ್ಯ, ಪ್ರವಾಸೋದ್ಯಮ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಉಡುಪಿಯಲ್ಲಿ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳು ನೆಲೆಸಿರುವುದು ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದ್ದು, ಈ ಜಾಲದ ಹಿಂದಿರುವ ಕಾಣದ ಕೈಗಳನ್ನು ತಕ್ಷಣ ಹೆಡೆಮುರಿ ಕಟ್ಟುವ ಕೆಲಸ ಪೊಲೀಸ್ ಇಲಾಖೆ ನಡೆಸಿ ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಬೇಕಾಗಿದೆ.

ಮಲ್ಪೆ ಮಾತ್ರವಲ್ಲದೇ ಕರಾವಳಿ ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವ ಅನಿವಾರ್ಯತೆ ಇದ್ದು, ನಕಲಿ ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಮಾಡಿ ಅಕ್ರಮವಾಗಿ ದೇಶದೊಳಗೆ ಕಳುಹಿಸುವ ಜಾಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಈ ಬಗ್ಗೆ ರಾಷ್ಟ್ರೀಯ ತನಿಖಾ ದಳದ ಮೂಲಕವೂ ತನಿಖೆ ನಡೆಸುವ ಬಗ್ಗೆಯೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.