ಉಡುಪಿ: ಜಗತ್ತಿನಲ್ಲಿ ಮಾನವನ ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಒಂದೊಂದು ರಕ್ತದ ಹನಿಯು
ಮೌಲ್ಯಯುತವಾಗಿದ್ದು, ಅದನ್ನು ಸೃಜಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಅರ್ಹರು ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಮಂಗಳವಾರ ನಗರದ ಮಣಿಪಾಲ ಎಂ.ಐ.ಎ.ಎಮ್.ಎಸ್ ಬುದ್ಧ ಆಯುರ್ವೇದ ಆಡಿಟೋರಿಯಂ ನಲ್ಲಿ ಜಿಲ್ಲಾಡಳಿತ, ಜಿಲ್ಲಾ
ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ, ರೋಟರ್ಯಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಮುನಿಯಾಲು ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ
ಮೆಡಿಕಲ್ ಸೈನ್ಸ್, ಆದರ್ಶ ಕಾಲೇಜ್ ಆಫ್ ನರ್ಸಿಂಗ್, ಉಡುಪಿ ಧನ್ವಂತರಿ ಕಾಲೇಜ್ ಆಫ್ ನರ್ಸಿಂಗ್, ಶ್ರೀ ಆದರ್ಶ ಕಾಲೇಜ್ ಆಫ್ ಅಲೈಡ್ ಎಂಡ್ ಪ್ಯಾರಾಮೆಡಿಕಲ್ ಸೈನ್ಸ್ ಮತ್ತು ಹೆಚ್.ಪಿ.ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಂಡ್ ಪ್ಯಾರಾಮೆಡಿಕಲ್ ಸೈನ್ಸ್ ಮಣಿಪಾಲ ಹಾಗೂ ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿ ಅನೇಕರು ಸರಿಯಾದ ಸಮಯದಲ್ಲಿ ರಕ್ತ ದೊರೆಯದೇ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ರಕ್ತದಾನದ ಮೂಲಕ
ಆಪತ್ತಿನಲ್ಲಿರುವವರ ಅಮೂಲ್ಯವಾದ ಜೀವವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ರಕ್ತದಾನಿಯನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು.
ಜಿಲ್ಲೆಯಲ್ಲಿ ಅನೇಕ ದಾನಿಗಳಿದ್ದು, ಇದುವರೆಗೂ ರಕ್ತದ ಕೊರತೆ ಕಂಡುಬಂದಿಲ್ಲ. ಅಲ್ಲದೇ ನೆರೆಯ ಅಕ್ಕಪಕ್ಕದ ಜಿಲ್ಲೆಯಲ್ಲಿಯೂ ಸಹ ರಕ್ತದ ಕೊರತೆ ಉಂಟಾದ ಸಂದರ್ಭದಲ್ಲಿ ನಮ್ಮ ಜಿಲ್ಲೆಯಿಂದ ರಕ್ತ ರವಾನೆ ಮಾಡಲಾಗುತ್ತಿದೆ. ರಕ್ತದ ಮಹತ್ವವನ್ನು ಅರಿತು
ರಕ್ತದಾನ ಮಾಡಲು ಯುವಜನತೆ ಸ್ವಯಂಪ್ರೇರಿತವಾಗಿ ಮುಂದೆ ಬರಬೇಕು ಎಂದರು.
ಮುನಿಯಾಲು ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಅಭ್ಯಾಸವನ್ನು ಕಾಲೇಜು ಹಂತದಿಂದಲೇ ರೂಢಿಸಿಕೊಳ್ಳಬೇಕು. ರಕ್ತದಾನ ಮಾಡುವುದರಿಂದ ಉತ್ತಮ ಅರೋಗ್ಯ ಹೊಂದಬಹುದಾಗಿದೆ ಎಂದರು.
ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಚಿದಾನಂದ ಸಂಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಅನಿತಾ ಡಿ ಸೋಜಾ, ಮೋಹಿತ್ ಪೆರ್ಡೂರು, ಸ್ವೀಟಿ ಜೆ ಫರ್ನಾಂಡೀಸ್, ದಿನೇಶ್ ಕಾಂಚನ್, ಸುಕೇಶ್ ಖಾರ್ವಿ ಮತ್ತು ಪುರುಷೋತ್ತಮ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ 175 ಯೂನಿಟ್ ರಕ್ತವನ್ನು ಸಂಗ್ರಹಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್, ಜಿಲ್ಲಾ ಸರ್ಜನ್ ಡಾ. ಹೆಚ್ ಅಶೋಕ್, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾಕುಮಾರಿ, ಆದರ್ಶ ಕಾಲೇಜ್ ಆಫ್ ನರ್ಸಿಂಗ್ನ ಕಾಲೇಜಿನ ಪ್ರಾಂಶುಪಾಲೆ ಕುಮಾರಿ ಸುದಿನ
ಎಂ, ಶ್ರೀ ಆದರ್ಶ ಕಾಲೇಜ್ ಆಫ್ ಅಲೈಡ್ ಎಂಡ್ ಪ್ಯಾರಾಮೆಡಿಕಲ್ ಸೈನ್ಸ್ನ ಪ್ರಾಂಶುಪಾಲ ಪ್ರೊ.ರವಿಕುಮಾರ್ ಟಿ.ಎನ್, ಹೆಚ್.ಪಿ.ಆರ್
ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಂಡ್ ಪ್ಯಾರಾಮೆಡಿಕಲ್ ಸೈನ್ಸ್ನ ಪ್ರಾಂಶುಪಾಲೆ ದಿವ್ಯಾಶ್ರೀ, ಉಡುಪಿ ಧನ್ವಂತರಿ ಕಾಲೇಜು ಆಫ್ ನರ್ಸಿಂಗ್ ಸಂತೆಕಟ್ಟೆಯ ಆಡಳಿತಾಧಿಕಾರಿ ಉದಯಕುಮಾರ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷ ರಘುನಾಥ ನಾಯಕ್,ಎನ್.ಎಸ್.ಎಸ್ ನೋಡೆಲ್ ಅಧಿಕಾರಿ ಡಾ. ನವನೀತ ಕೆ.ಪಿ, ಕಾಲೇಜಿನ ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮೇಲ್ವಿಚಾರಕ ಮಹಾಬಲೇಶ್ವರ ಬಿ.ಎಂ ಸ್ವಾಗತಿಸಿದರು, ಕಾಲೇಜಿನ ಎನ್.ಎಸ್.ಎಸ್ ನೋಡೆಲ್ ಅಧಿಕಾರಿ ಡಾ. ಆಶಿತ ಆರ್ ನಿರೂಪಿಸಿದರೆ, ಪ್ರೊ.ಡಾ. ಮಾಧವಿ ವಂದಿಸಿದರು.