ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ (ರಿ.).ಜೀರ್ಣೋದ್ಧಾರ ಕಾರ್ಯಕ್ರಮ

ಉಡುಪಿ:ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಅತ್ಯದ್ಭುತವಾಗಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಈಗಾಗಲೇ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ಸಮಿತಿಯನ್ನು ರಚಿಸಲಾಗಿದೆ.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕಾಗಿದ್ದು, ನಗರಸಭಾ ವ್ಯಾಪ್ತಿಯ 35 ವಾರ್ಡ್ ಗಳಲ್ಲೂ ಪ್ರತೀ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ವಿಷಯ ತಲುಪುವಂತೆ ಮಾಡಲು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಗೌರವ ಸಲಹೆಗಾರ, ಉಡುಪಿ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣರವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮನೋಹರ. ಎಸ್. ಶೆಟ್ಟಿ ಆಡಳಿತ ನಿರ್ದೇಶಕರು, ಸಾಯಿರಾಧ ಗ್ರೂಪ್ ಮತ್ತು ಉಡುಪಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ ಉಸ್ತುವಾರಿಯಲ್ಲಿ ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಉಡುಪಿ ಜಿಲ್ಲಾ ಸಮಿತಿ ಇದರ ಪ್ರಧಾನ ಸಂಚಾಲಕರಾದ ಸುಪ್ರಸಾದ್ ಶೆಟ್ಟಿ ಬೈಕಾಡಿ ಇವರ ಸಮಕ್ಷಮದಲ್ಲಿ ತಾರೀಕು 24/09/2024 ನೇ ಮಂಗಳವಾರ ಅಮ್ಮನ ಸಾನಿಧ್ಯದಲ್ಲಿ ಪ್ರಸಾದ ನೀಡಿ ಪ್ರಾರ್ಥಿಸುವ ಮೂಲಕ 9 ಜನ ಪುರುಷರು ಮತ್ತು 9 ಜನ ಮಹಿಳೆಯರು ಸೇರಿದಂತೆ ಒಟ್ಟು 18 ಜನರ ತಂಡವನ್ನು ರಚಿಸಲಾಯಿತು.

ತದನಂತರ ನವದುರ್ಗಾ ಮಂಟಪದಲ್ಲಿ ನಡೆದ ಸಭೆಯಲ್ಲಿ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿಯವರು ಈವರೆಗೆ ನಡೆದು ಬಂದ ಅಭಿವೃದ್ಧಿ ಕಾರ್ಯಗಳು, ಬ್ರಹ್ಮಕಲಶೋತ್ಸವ ಹಾಗೂ ನವದುರ್ಗಾ ಲೇಖನ ಯಜ್ಞದ ಬಗ್ಗೆ ಪ್ರಸ್ತಾಪಿಸಿ, ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು.

ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ ಮಾತನಾಡಿ ನನ್ನ ತಾಯಿಯೊಂದಿಗೆ ಬಾಲ್ಯದಿಂದಲೂ ಈ ಕ್ಷೇತ್ರಕ್ಕೆ ಪೂಜೆಗೆ ಬರುತ್ತಿದ್ದು ನಾನು ಕಾಪುವಿನ ಅಮ್ಮನ ಪರಮ ಭಕ್ತ ಈ ಪುಣ್ಯಕಾರ್ಯದಲ್ಲಿ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ಭಾಗ್ಯ ಎಂದು ಉಡುಪಿ ನಗರಸಭಾ 35 ಜನ ಸದಸ್ಯರೊಂದಿಗೆ ಈ ಬಗ್ಗೆ ಚರ್ಚಿಸಿ ಕಾಪುವಿನ ಅಮ್ಮನ ಸೇವೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಉಡುಪಿ ನಗರಸಭಾ ಸಮಿತಿಯ ಪ್ರಧಾನ ಸಂಚಾಲಕರಾದ ಕೊಡವೂರು ದಿವಾಕರ ಶೆಟ್ಟಿಯವರು ಎಲ್ಲಾ ಸದಸ್ಯರಿಗೆ ನಾವು ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿದ್ದು, ಉಡುಪಿ ನಿತ್ಯಾನಂದ ಮಂದಿರದ ಪ್ರಥಮ ಮಹಡಿಯಲ್ಲಿ ಕಚೇರಿಯನ್ನು ಶಾಸಕ ಯಶಪಾಲ್ ಸುವರ್ಣ ಇವರಿಂದ ಉದ್ಘಾಟಿಸುವುದಾಗಿ ಸಭೆಗೆ ತಿಳಿಸಿದರು. ಅಲ್ಲದೆ ನಾವು ಎಲ್ಲಾ ಸದಸ್ಯರು ಕಾಪುವಿನ ಅಮ್ಮನ ಸೇವೆಗೆ ಕಂಕಣ ಬದ್ಧರಾಗಬೇಕೆಂದು ವಿನಂತಿಸಿದರು.

ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಪ್ರಸಾದ್ ಶೆಟ್ಟಿ ಮಾತನಾಡಿ ನಗರಸಭಾ ವ್ಯಾಪ್ತಿಯ ಈ ಸಮಿತಿಯಿಂದಾಗಿ ನನಗೆ ಬಹಳಷ್ಟು ಬಲ ಬಂದಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮದ ಜನರಿಗೆ ಈ ಭವ್ಯ ಕಾರ್ಯದ ವಿಷಯ ತಲುಪಿಸವುದಲ್ಲದೇ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ಸಮಿತಿಯ 5 ಜನ ಪ್ರಧಾನ ಸಂಚಾಲಕರೊಂದಿಗೆ ಸಂಪರ್ಕ ಇಟ್ಟುಕೊಂಡು ಪ್ರತೀ ದಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಸುದ್ದಿಯನ್ನು ತಲುಪಿಸುತ್ತೇವೆ ಎಂದು ತಿಳಿಸಿದರು.

ಉಡುಪಿ ನಗರಸಭಾ ಸಮಿತಿಯ ಪ್ರಧಾನ ಸಂಚಾಲಕರಾಗಿ ಕೊಡವೂರು ದಿವಾಕರ ಶೆಟ್ಟಿ, ಮುಖ್ಯ ಸಂಚಾಲಕರಾಗಿ ಗಿರೀಶ್ ಅಂಚನ್, ಸಂಚಾಲಕರುಗಳಾಗಿ ರಮೇಶ್ ಶೆಟ್ಟಿ ಕಾಪು ಕೊಲ್ಯ, ಮಂಜುನಾಥ್ ಹೆಬ್ಬಾರ್, ಬಾಲಕೃಷ್ಣ ಶೆಟ್ಟಿ, ಅಶೋಕ್ ನಾಯ್ಕ್, ಸಂತೋಷ್ ಜತ್ತನ್, ವಿಜಯ್ ಕೊಡವೂರು, ಸುಂದರ್ ಕಲ್ಮಾಡಿ ಮತ್ತು ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾಗಿ ನಿರೂಪಮ ಪ್ರಸಾದ್, ಸಂಚಾಲಕರುಗಳಾಗಿ ಅಮೃತ ಕೃಷ್ಣಮೂರ್ತಿ, ಪೂರ್ಣಿಮಾ ಸುರೇಶ್, ಪೂರ್ಣಿಮಾ ಶೆಟ್ಟಿ, ಗಿರಿಜಾ ಶಿವರಾಮ್ ಶೆಟ್ಟಿ, ಕಲ್ಪನಾ, ಆಶಾ, ವೀಣಾ ಶೆಟ್ಟಿ, ಇಂದಿರಾ ಮಲ್ಪೆ ಆಯ್ಕೆಯಾಗಿರುತ್ತಾರೆ.

ಸಭೆಯಲ್ಲಿದ್ದ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಸಲಹೆ-ಸೂಚನೆಗಳನ್ನು ನೀಡಿ, ನಾವು ಇಂದಿನಿಂದಲೇ ನವದುರ್ಗಾ ಲೇಖನ ಯಜ್ಞದ ಬಗ್ಗೆ ಉಡುಪಿ ಭಾಗದ ಜನರಿಗೆ ಸುದ್ಧಿ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಈ ಲೇಖನ ಯಜ್ಞದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ವಿನಂತಿಸುತ್ತೇವೆ ಎಂದರು.

ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಕೋಶಾಧಿಕಾರಿ ಕೆ. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ಸುವರ್ಧನ್ ಉಡುಪಿ ಉಪಸ್ಥಿತರಿದ್ದರು. ನವದುರ್ಗಾ ಲೇಖನ ಯಜ್ಞದ ಪ್ರಧಾನ ಕಾರ್ಯದರ್ಶಿ ಯೋಗಿಶ್ ವಿ. ಶೆಟ್ಟಿ ಧನ್ಯವಾದಗೈದರು.