ಉಡುಪಿ: ಕಾಂಗ್ರೆಸ್ ಸರ್ಕಾರ ಬಡ ಜನರ ಬಿಪಿಎಲ್ ಕಾರ್ಡ್ ರದ್ದುಪಡಿಸುವ 6ನೇ ಗ್ಯಾರಂಟಿ ಜಾರಿಗೆ ತಯಾರಿ ನಡೆಸುತ್ತಿದೆ. ಮುಡಾ, ವಾಲ್ಮೀಕಿ ಸಹಿತ ವಿವಿಧ ಹಗರಣಗಳ ಮೂಲಕ ಕೋಟಿಗಟ್ಟಲೆ ಭ್ರಷ್ಟಾಚಾರ ನಡೆಸಿರುವ ಕಾಂಗ್ರೆಸ್ ಸರ್ಕಾರ ಇದೀಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ನಡೆಸಲು ಹೊರಟಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆರೋಪಿಸಿದರು.
ಉಡುಪಿ ಪತ್ರಿಕಾಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರೆಂಟಿಗಳ ಘೋಷಣೆಯ ಮೂಲಕ ಅಧಿಕಾರಕ್ಕೆ ಬಂದು ತಾನು ಘೋಷಿಸಿದ ಐದು ಗ್ಯಾರಂಟಿಗಳು ಕೂಡ ಸಂಪೂರ್ಣ ವಿಫಲವಾಗಿದೆ. ರಾಜ್ಯ ಜನತೆ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ನಾಲ್ಕು ತಿಂಗಳಾಗಿದೆ. ಅನ್ನಭಾಗ್ಯದ ಅಕ್ಕಿಯು ಇಲ್ಲ ಅದರ ಹಣವು ಪಾವತಿ ಆಗಿಲ್ಲ. ಗೃಹ ಜ್ಯೋತಿ ಭಾಗ್ಯವು ನೆನೆಗುದಿಗೆ ಬಿದ್ದಿದ್ದು, ವಿದ್ಯುತ್ ಬಿಲ್ ಏರಿಕೆಯಿಂದ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ಯುವ ನಿಧಿ ಯೋಜನೆ ಕೂಡ ಹಳ್ಳ ಹಿಡಿದಿದೆ. ಅವೈಜ್ಞಾನಿಕ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ರಾಜ್ಯ ಜನತೆಗೆ ಕಾಂಗ್ರೆಸ್ ಸರಕಾರ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಕೂಲಿ ಕಾರ್ಮಿಕರು ಮತ್ತು ಕಡುಬಡವರ ಬಿ.ಪಿ.ಎಲ್. ಕಾರ್ಡ್ ಅನ್ನು ರದ್ದುಗೊಳಿಸುವ ಆರನೇ ಗ್ಯಾರಂಟಿ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವ ಹಂತದಲ್ಲಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಪ್ರತಿ ಗ್ರಾಮದ 400 ಕ್ಕಿಂತಲೂ ಹೆಚ್ಚು ಕುಟುಂಬಗಳ ಬಿ.ಪಿ.ಎಲ್. ಕಾರ್ಡುಗಳ ಪಟ್ಟಿಯನ್ನು ಪರಿಶೀಲನೆಗೆ ಸ್ಥಳೀಯ ರೇಷನ್ ಅಂಗಡಿಗೆ ಕಳಿಸಿದ್ದು, ಇದರಿಂದ ಬಡ ಜನರ ಬಿ.ಪಿ.ಎಲ್. ಕಾರ್ಡ್ ರದ್ದಾಗುವ ಭೀತಿ ಎದುರಾಗಿದೆ. ಸರ್ಕಾರ ಮಾನದಂಡವನ್ನು ಬದಲಿಸಿ, ಮನೆ ಸಮೀಕ್ಷೆ ನಡೆಸಿ ಅವರ ಸ್ಥಿತಿಗತಿಯನ್ನು ಅರಿತ ಮೇಲೆಯೇ ಮುಂದಿನ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಸಮೀಕ್ಷೆ ನಡೆಸದೆ ಏಕಾಏಕಿ ಬಿ.ಪಿ.ಎಲ್. ಕಾರ್ಡ್ ರದ್ದುಪಡಿಸಿದರೆ ಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಅಂಗನವಾಡಿ ಕಾರ್ಯಕರ್ತರಿಗೆ, ಬಿಸಿಯೂಟ ಸಿಬ್ಬಂದಿಗೆ ವೇತನ ನೀಡಿಲ್ಲ. ಹೈನುಗಾರರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಸರ್ಕಾರಿ ಕಚೇರಿಯ ವಿದ್ಯುತ್ ಬಿಲ್ ಕಟ್ಟಲಾಗದೆ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಹೇಳಿದರು.