ಕಾನೂನು ನೆರವಿನ ಅರಿವು ಮೂಡಿಸುವುದು ವಕೀಲರ ಕರ್ತವ್ಯ- ಸಿ.ಎಂ. ಜೋಶಿ

ಉಡುಪಿ: ದೇಶದಲ್ಲಿ ಶೇಕಡ 80 ರಷ್ಟು ಜನರು ಉಚಿತ ಕಾನೂನು ಸಹಾಯ ಪಡೆಯುವ ಆರ್ಹತೆ ಹೊಂದಿದ್ದರೂ, ಮಾಹಿತಿಯ ಕೊರತೆಯಿಂದಾಗಿ ನ್ಯಾಯಾಲಯದ ಬಾಗಿಲು ತಟ್ಟುವವರ ಸಂಖ್ಯೆ ಅತ್ಯಲ್ಪ. ಜನ ಸಾಮಾನ್ಯರಿಗಾಗಿ ಸಂವಿಧಾನದಿಂದ ಕಡ್ಡಾಯವಾಗಿ ಕೊಡಮಾಡಲ್ಪಟ್ಟಿರುವ ಉಚಿತ ಕಾನೂನು ನೆರವಿನ ಬಗ್ಗೆ ತಿಳಿಸುವುದು ಪ್ಯಾನಲ್ ವಕೀಲರ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ. ಜೋಶಿ ಹೇಳಿದರು.

ಅವರು ಶುಕ್ರವಾರ ಆಯೋಜಿಸಲಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ (ರಿ) ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ಯಾನಲ್ ವಕೀಲರಿಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸುತ್ತಾ ಮಾತನಾಡಿದರು.

ಈ ಕಾರ್ಯಾಗಾರದ ಪ್ರಮುಖ ಅಂಶ ಸಂವಿಧಾನದ ಆಶಯದಂತೆ ಜನತೆಯನ್ನು ನ್ಯಾಯಾಲಯದ ಸಮೀಪ ತಂದು ಪ್ರತೀ ಒಬ್ಬರಿಗೂ ಸಮಾನ ನ್ಯಾಯಒದಗಿಸುವುದಾಗಿದೆ. ವಕೀಲರು ತಾವು ನಿಜವಾಗಿಯೂ ಸಂವಿಧಾನದ ಆದೇಶಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕುಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದ ಅತಿಥಿಗಳಾದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಎಸ್.ಪಂಡಿತ್ ಮಾತನಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಸ್ವಾಗತಿಸಿದರು. ವಕೀಲ ಬಿ.ನಾಗರಾಜ್ ವಂದಿಸಿ, ವಕೀಲ ರಾಜಶೇಕರ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ, ವಕೀಲರ ಸಂಘ (ರಿ)ಉಡುಪಿಯ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್, ಜಿಲ್ಲಾ ಸರ್ಕಾರಿ ವಕೀಲ ಶಶಿಧರ ಎರ್ಮಾಳ್, ಹಿರಿಯ ಮತ್ತು ಕಿರಿಯ ವಕೀಲರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾನೂನಿನ ಬಗ್ಗೆ ಮಾಹಿತಿ ಹಾಗೂ ಸಮಾಜದಲ್ಲಿ ವಕೀಲರ ಪಾತ್ರವನ್ನು ಬಿಂಬಿಸುವ ವಿಡಿಯೋವನ್ನು ಪ್ರದರ್ಶಿಸಲಾಯಿತು.