ಬೆಂಗಳೂರು ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣ: ಹಂತಕನ ಡೆತ್ ನೋಟ್’ನಲ್ಲಿ ಕೊಲೆ ರಹಸ್ಯ ಬಯಲು..!

ಬೆಂಗಳೂರು ಸೆ.26: ನಗರದ ವೈಯಾಲಿಕಾವಲ್ ನ ಪೈಪ್ ಲೈನ್ ರಸ್ತೆಯ ಮನೆಯೊಂದರ ಫ್ರಿಡ್ಜ್ ನಲ್ಲಿ ಸೆ.21ರಂದು ನೇಪಾಳ ಮೂಲದ ಮಹಾಲಕ್ಷ್ಮಿ ಎಂಬಾಕೆಯ ದೇಹ ತುಂಡು ತುಂಡು ಮಾಡಿ ಬರ್ಬರವಾಗಿ ಹತ್ಯೆ ಮಾಡಿ ಇಡಲಾಗಿತ್ತು. ಈ ಪ್ರಕರಣ ಕೈಗೆತ್ತಿಕೊಂಡ ವೈಯಾಲಿಕಾವಲ್ ಪೊಲೀಸರು ಹಲವು ಆಯಾಮದಲ್ಲಿ ತನಿಖೆ ಆರಂಭಿಸಿದ್ದರು. ಆದರೆ ಆರೋಪಿಯ ಪತ್ತೆ ಮಾಡಲು ಹೊರ ರಾಜ್ಯಕ್ಕೆ ಹೋದ ಪೊಲೀಸರಿಗೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿದೆ. ಜೊತೆಗೆ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್​ನಲ್ಲಿ ತಾನೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಯಾವ ರೀತಿ ಕೊಲೆ ಮಾಡಿದ? ಏಕೆ ಕೊಲೆ ಮಾಡಿದ? ಎಂಬ ವಿಚಾರಗಳ ಬಗ್ಗೆ ಮೃತ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ.

ಡೈರಿಯಲ್ಲಿ ಡೆತ್ ನೋಟು ಪತ್ತೆ:
ಮಹಿಳೆ ಕೊಲೆ ಪ್ರಕರಣದಲ್ಲಿ ಒರಿಸ್ಸಾ ಮೂಲದ ಮುಕ್ತಿ ರಂಜನ್ ರಾಯ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಈತನೇ ಈ ಕೃತ್ಯ ಎಸಗಿರೊ ಶಂಕೆ ವ್ಯಕ್ತವಾಗಿತ್ತು. ಆತನಿಗಾಗಿ ಹಲವು ಕಡೆ ಹುಡುಕಾಡಿದ್ದ ಪೊಲೀಸರಿಗೆ ಆತ ಓರಿಸ್ಸಾಗೆ ತೆರಳಿರೊ ಮಾಹಿತಿ ಸಿಕ್ಕಿತ್ತು. ಸಿಕ್ಕ ಮಾಹಿತಿ ಆಧರಿಸಿ ಒರಿಸ್ಸಾಗೆ ತೆರಳಿದ್ದ ಪೊಲೀಸರಿಗೆ ಈಗ ಶಾಕ್ ಆಗಿದ್ದು, ಮುಕ್ತಿ ರಂಜನ್ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿ ಬಳಿ ಸಿಕ್ಕಿರುವ ಡೈರಿಯಲ್ಲಿ ಡೆತ್ ನೋಟು ಪತ್ತೆಯಾಗಿದೆ. ರಂಜನ್ ಡೆತ್ ನೋಟ್ ಬರೆದಿಟ್ಟು ಸ್ಮಶಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಂಜನ್ ಡೆತ್ ನೋಟ್ ನಲ್ಲಿ ಹತ್ಯೆ ಬಗ್ಗೆ ಉಲ್ಲೆಖ:
ಸೆಪ್ಟಂಬರ್ 3ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ ಎಂದು ಮಹಾಲಕ್ಷ್ಮೀ ಹತ್ಯೆ ಕುರಿತು ರಂಜನ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ. ಸೆಪ್ಟಂಬರ್‌ 3 ರಂದು ಆಕೆಯ ಮನೆಗೆ ಹೋದಾಗ ಕೃತ್ಯ ಎಸಗಿದ್ದಾಗಿ ಬರೆದಿದ್ದಾನೆ. ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು, ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಡೆತ್ ನೋಟ್​ನಲ್ಲಿ ಕೊಲೆ ಮಾಡಲು ಕಾರಣವೇನೆಂಬುದನ್ನು ರಂಜನ್ ಬಹಿರಂಗಪಡಿಸಿದ್ದಾನೆ. ಇನ್ನು ಮುಕ್ತಿ ರಂಜನ್ ರಾಯ್ ಮನೆಯಲ್ಲಿ ಬೆಂಗಳೂರು ಪೊಲೀಸರ ತಂಡ ಬೀಡುಬಿಟ್ಟಿದೆ. ಸ್ಥಳೀಯ ಪೊಲೀಸರ ಜೊತೆ ಆರೋಪಿಯ ಬೆರಳಚ್ಚು ಹಾಗೂ ಡೆತ್ ನೋಟು ಪ್ರತಿಯನ್ನು ಪಡೆಯಲಿದ್ದಾರೆ.

ಸ್ಮಶಾನದಲ್ಲಿ ಶವ ಪತ್ತೆ:
ಮೂಲಗಳ ಮಾಹಿತಿ ಪ್ರಕಾರ ಓರಿಸ್ಸಾದ ಫಂಡಿ ಗ್ರಾಮದ ನಿವಾಸಿಯಾದ ರಂಜನ್ ಮೊನ್ನೆ ಬೆಳಿಗ್ಗೆಯಷ್ಟೇ ಮನೆಗೆ ಬಂದಿದ್ದನಂತೆ. ಕೆಲ ಕಾಲ ಮನೆಯಲ್ಲೇ ಇದ್ದ ಈತ ರಾತ್ರಿ ಸ್ಕೂಟಿ ಬೈಕ್ ಹತ್ತಿ ಹೊರಗಡೆ ತೆರಳಿದ್ದ. ಈ ವೇಳೆ ತನ್ನ ಲ್ಯಾಪ್ ಟಾಪ್ ಸಮೇತ ಹೋದ ಆತ ಬಳಿಕ ಎಲ್ಲಿ ಹೋದ ಎಂಬುದು ಯಾರಿಗೂ ತಿಳಿದಿರಲಿಲ್ಲವಂತೆ. ಆದ್ರೆ ನಿನ್ನೆ ಕುಳೆಪಾದ ಎಂಬ ಸ್ಮಶಾನದಲ್ಲಿ ಆತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸದ್ಯ ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಸಂಬಂಧ ದುಶಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಕಡೆ ಒರಿಸ್ಸಾಗಿ ತೆರಳಿದ್ದ ಬೆಂಗಳೂರು ಪೊಲೀಸರು ಈ ಬಗ್ಗೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.