ಉಡುಪಿ: ಗುರು ನಿತ್ಯಾನಂದ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯು ಸೆಪ್ಟೆಂಬರ್ 22 ಗುರುವಾರದಂದು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ಗುರು ನಿತ್ಯಾನಂದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ನಿರ್ದೇಶಕರಾಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಸೊಸೈಟಿಯ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಜಾನಪದ ಕ್ಷೇತ್ರ, ನಾಟಕ ಕ್ಷೇತ್ರ, ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವುದು ಮಾತ್ರವಲ್ಲದೇ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾನಿಧಿ ವಿತರಣೆ, ವಿಕಲಚೇತನರ ಕಲ್ಯಾಣಕ್ಕೆ ವಿಕಲಚೇತನ ಕಲ್ಯಾಣ ನಿಧಿ ವಿತರಣೆ, ಅನಾರೋಗ್ಯ ಪೀಡಿತರಿಗೆ ಆರೋಗ್ಯ ನಿಧಿ ವಿತರಣೆ, ಅಶಕ್ತರ ನೆರವಿಗೆ ಧಾವಿಸಿ ಕಿಟ್ ವಿತರಣೆ, ಬಡ ವಿದ್ಯಾರ್ಥಿಗಳ ಮನೆಗೆ ಉಚಿತ ಸೋಲಾರ್ ದೀಪದ ವ್ಯವಸ್ಥೆ, ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಹೀಗೆ ಹಲವು ಬಗೆಗಳಲ್ಲಿ ಸಮಾಜ ಸೇವೆಯನ್ನು ಮಾಡುತ್ತ ಬಂದಿರುತ್ತಾರೆ. ತಮ್ಮ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಮೂಲಕ ರಾಜ್ಯದಾದ್ಯಂತ ಜಾನಪದ ಕಾರ್ಯಕ್ರಮಗಳನ್ನು ಸಂಘಟಿಸಿ, ಟ್ರಸ್ಟ್ ನ ಸಹಕಾರದೊಂದಿಗೆ ನಡೆಸಿದ ಜಾನಪದ ಕ್ಷೇತ್ರದ ಸಮಾಜಮುಖಿ ಕಾರ್ಯಕ್ರಮಗಳು ಅಪಾರ ಜನಮನ್ನಣೆಗೆ ಪಾತ್ರವಾಗಿರುತ್ತದೆ. ಈ ನಾಡಿನ ಜಾನಪದ ಕಲೆಗಳ ಪ್ರದರ್ಶನದೊಂದಿಗೆ ಅನ್ಯ ಜಿಲ್ಲೆಯ ಕಲಾ ಪ್ರಕಾರಗಳನ್ನು ಜೋಡಿಸಿಕೊಂಡು ವಿಭಿನ್ನವಾಗಿ ಜಾನಪದ ವೈವಿಧ್ಯ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಜಾನಪದ ಕಲಾ ಸೊಗಡನ್ನು ಪ್ರದರ್ಶಿಸುವ ಕಾರ್ಯದೊಂದಿಗೆ, ಕಳೆದ ಹದಿನೆಂಟು ವರ್ಷಗಳಿಂದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆ. ಗೋವಿಂದ ಭಟ್ ಮೊದಲಾದವರ ಗೌರವಾರ್ಥ ಸಪ್ತಾಹ ಕಾರ್ಯಕ್ರಮಗಳನ್ನು ಸಂಘಟಿಸಿ, ಹತ್ತು ವರ್ಷಗಳಿಂದ ಸುಬ್ರಹ್ಮಣ್ಯ ಧಾರೇಶ್ವರ ಅವರ ಅಷ್ಟಾಹ ಕಾರ್ಯಕ್ರಮದ ನೇತೃತ್ವ ವಹಿಸಿ, 6 ವರ್ಷಗಳಿಂದ ‘ಯಕ್ಷಪಂಚಮಿ’ಯಂಥ ಕಾರ್ಯಕ್ರಮಗಳನ್ನು ಆಯೋಜಿಸಿ, ಕುಣಿತ ಭಜನಾ ಪ್ರದರ್ಶನ, ಕುಣಿತ ಭಜನಾ ಸ್ಪರ್ಧೆ, ಭಜನೆಯ ಮಹತ್ವದ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿರುವ ಡಾ. ತಲ್ಲೂರು ಅವರ ಸಮಾಜ ಮುಖಿ ಸೇವೆಗಳು ಎಲ್ಲರಿಗೂ ಸ್ಪೂರ್ತಿ. ಡಾ. ತಲ್ಲೂರು ಯಕ್ಷಗಾನ ವಿದ್ವಾಂಸರನ್ನು ಗುರುತಿಸಿ ತಮ್ಮ ಪೂಜ್ಯ ಮಾತಾಪಿತರ ಸ್ಮೃತಿಯಲ್ಲಿ “ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ”ಯನ್ನು ಕಳೆದ 18 ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ.
ಜಾನಪದ ವಿದ್ವಾಂಸರನ್ನು ಗುರುತಿಸಿ “ಸಾಹಿತ್ಯ ಸಾಂಸ್ಕೃತಿಕ ಜಾನಪದ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದ್ದಾರೆ. ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿಯನ್ನು ಸ್ಥಾಪಿಸಿ ಅದನ್ನು ಕಳೆದ 8 ವರ್ಷಗಳಿಂದ ಗಣ್ಯಮಾನ್ಯರಿಗೆ ನೀಡಿದ್ದಾರೆ.
ಅರ್ಹ ಹಿರಿಯ ಜಾನಪದ ಕಲಾವಿದರು, ಹಿರಿಯ ಭಜಕರು, ಕಲಾ ಸಂಘಟಕರು, ಕಲಾ ಪ್ರೋತ್ಸಾಹಕರನ್ನು ಗುರುತಿಸಿ ಅವರಿಗೆ ಜಾನಪದ ಪ್ರಶಸ್ತಿಯನ್ನು ಪ್ರಧಾನ ಮಾಡಿ ಕಲೆಗೆ ಮತ್ತಷ್ಟು ಸ್ಪೂರ್ತಿ ನೀಡಿ ಸಮಾಜಕ್ಕೆ ಮಾದರಿಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಗುರುನಿತ್ಯಾನಂದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ. ಲಿ. ಉಡುಪಿ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾದ ಶ್ರೀ ಕೃಷ್ಣ ಎಂ ಆಳ್ವ, ನಿರ್ದೇಶಕರಾದ ಶ್ರೀ ಮೋಹನ್ ಶೆಟ್ಟಿ ಮೂಡನಿಡoಬೂರು, ಶ್ರೀ ಜಯರಾಮ ಶೆಟ್ಟಿ ಕೊಡಂಕೂರು, ಶ್ರೀಮತಿ ಶ್ವೇತಾ ಜಯಕರ ಶೆಟ್ಟಿ, ಶ್ರೀ ಮನೋಹರ ಶೆಟ್ಟಿ ತೋನ್ಸೆ, ಶ್ರೀ ವಿ. ಚಂದ್ರಹಾಸ ಶೆಟ್ಟಿ, ಶ್ರೀಮತಿ ಸುಲೋಚನ ಶೆಟ್ಟಿ, ಶ್ರೀ ಸಂತೋಷ್ ಆರ್ ಶೆಟ್ಟಿ, ಕಾರ್ಯದರ್ಶಿ ಶ್ರೀ ರಾಜೇಶ್ ಶೆಟ್ಟಿ, ಹಾಗೂ ಸೊಸೈಟಿಯ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.